ಬೆಂಗಳೂರು: ಡಯಾಬಿಟಿಸ್ ಖಾಯಿಲೆಗೆ ಔಷಧಿ ನೀಡುತ್ತೇವೆ ಎಂದು ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ರಾಮ್‍ಮೂರ್ತಿ ಬಂಧಿತ ಆರೋಪಿ. ವಾಸುದೇವ್ ಮೂರ್ತಿ ಎಂಬುವವರ ಬಳಿ ಆಯುರ್ವೇದ ಎಣ್ಣೆಗೆ ಚಿನ್ನ, ಬೆಳ್ಳಿ ಮತ್ತು ವಜ್ರ ಮಿಶ್ರಿತ ಭಸ್ಮವನ್ನು ಹಾಕಿ ಮಾಸಾಜ್ ಮಾಡಿದರೆ ಡಯಾಬಿಟಿಸ್ ಕಡಿಮೆಯಾಗುತ್ತದೆ ಎಂದು ಬುರುಡೆ ಬಿಟ್ಟು ಇದಕ್ಕಾಗಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡಿದ್ದಾನೆ.
ಶಾಂತಿನಗರದ ಕೆ.ಎಚ್ ರಸ್ತೆಯ ಆಯುರ್ವೇದ ಅಂಗಡಿಯಲ್ಲಿ ಎಣ್ಣೆ ಸಿಗುತ್ತೆ ಎಂದು ವಾಸುದೇವ್ ಅವರನ್ನು ಅಂಗಡಿ ಹತ್ತಿರ ಕರೆಸಿ ಅಲ್ಲಿಯೇ ಹಣ ಪಡೆದುಕೊಂಡಿದ್ದಾನೆ. ಇದಕ್ಕೆ ರಾಮ್ ಮೂರ್ತಿ ಮತ್ತು ಶಿವಾನಂದ್ ಬಾಲಾಜಿ ಎಂಬುವವರ ಕೂಡ ಸಾಥ್ ನೀಡಿದ್ದಾರೆ. ಆರೋಪಿಗಳ ಮಾತನ್ನು ನಂಬಿ ವಾಸುದೇವ್ ಹಣ ನೀಡಿದ್ದಾರೆ. ಆದರೆ ಆರೋಪಿಗಳು ಒಂದು ತಿಂಗಳಿನಲ್ಲಿ ಕಾಯಿಲೆಯೇ ವಾಸಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಮೂರು ತಿಂಗಳಾದರೂ ಖಾಯಿಲೆ ವಾಸಿಯಾಗಿರಲ್ಲ.
ಇದರಿಂದ ಅನುಮಾನಗೊಂಡ ವಾಸುದೇವ್ ಶಾಂತಿನಗರ ಆಯುರ್ವೇದ ಅಂಗಡಿಗೆ ಹೋದಾಗ ಅಂಗಡಿಗೆ ಬೀಗ ಹಾಕಿತ್ತು. ನಂತರ ಇದೊಂದು ಮೋಸದ ಜಾಲ ಎಂದು ಗೊತ್ತಾಗಿದೆ. ಇದೇ ರೀತಿ ಈ ಗ್ಯಾಂಗ್ ತುಂಬ ಜನರಿಗೆ ಮೋಸ ಮಾಡಿದೆ ಎನ್ನಲಾಗಿದೆ. ಸದ್ಯ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರಿಗೆ ಬಲೆ ಬೀಸಿದ್ದಾರೆ.