ಬೆಂಗಳೂರು: ರಾಜೀನಾಮೆ ಕೊಟ್ಟು ಮುಂಬೈಗೆ ಹಾರಿರುವ ಅತೃಪ್ತರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿಕೊಂಡಿದ್ದಾರೆ.
ಪರಮೇಶ್ವರ್ ನಿವಾಸದ ಮುಂದೆ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮಲ್ಲಿ ಕೆಲವರಿಗೆ ಮಂತ್ರಿಗಳಾಗಿಲ್ಲ ಎನ್ನುವ ಅಸಮಾಧಾನವಿದೆ. ಆದರೆ ಇದು ಸಮ್ಮಿಶ್ರ ಸರ್ಕಾರವಾಗಿರುವ ಕಾರಣ ಕಾಂಗ್ರೆಸ್ಸಿಗೆ ಬಂದಿರುವ 27 ಸ್ಥಾನಗಳಲ್ಲಿ ಎಲ್ಲರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು 22 ಜನಕ್ಕೆ ಮಂತ್ರಿ ಸ್ಥಾನ ನೀಡಿದ್ದೇವೆ. ಮಂತ್ರಿ ಸ್ಥಾನ ನೀಡುವ ಮೊದಲೇ ಇದನ್ನೆಲ್ಲ ಹೇಳಿದ್ದೇವೆ. ಎರಡು ಬ್ಯಾಚ್ ಮಾಡುವ ತೀರ್ಮಾನ ಮಾಡಿದ್ದೆವು. ಹಾಗೆಯೇ ಇನ್ನೇನು ಸ್ವಲ್ಪ ದಿನ ಕಳೆದ ಬಳಿಕ ಸಂಪುಟ ಪುನರಾಚನೆ ಮಾಡುವ ಅಭಿಪ್ರಾಯವೂ ಇತ್ತು. ಆದರೆ ಇದೀಗ ನಮ್ಮ ಸಚಿವರು ಎಲ್ಲರೂ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುವ ಮೂಲಕ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎಂದರು.
ಯಾರಿಗೆ ಮಂತ್ರಿ ಸ್ಥಾನ ಬೇಕು ಅಂತ ಆಸೆ ಇದೆಯೋ ಅಥವಾ ಯಾರೂ ಆ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದರೂ ಅವರೆಲ್ಲರಿಗೂ ಸಚಿವ ಸ್ಥಾನ ನೀಡಲಾಗುವುದು. ಬಿಜೆಪಿಯ ಆಮಿಷಕ್ಕೆ ಒಳಗಾಗಬೇಡಿ. ನಾವು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುತ್ತೇವೆ. ಹೀಗಾಗಿ ಆತುರದ ತೀರ್ಮಾನವನ್ನು ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಕಳೆದ ಚುನಾವಣೆಯಲ್ಲಿ ಅವರಿಗೆ ಜನ ಸರ್ಕಾರ ಮಾಡಿ ಎಂದು ಜನಾದೇಶ ಕೊಟ್ಟಿಲ್ಲ. 2018ರ ಶೇಕಡಾವಾರು ಲೆಕ್ಕಾರದಲ್ಲೂ ಬಿಜೆಪಿಗಿಂತ ಕಾಂಗ್ರೆಸ್‍ಗೆ ವೋಟು ಹೆಚ್ಚು ಪಡೆದಿದೆ. ಕೇಂದ್ರ ಸರ್ಕಾರವನ್ನು ಬಳಸಿಕೊಂಡು ಸಮ್ಮಿಶ್ರ ಸರ್ಕಾರವನ್ನು ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಬರೀ ರಾಜ್ಯ ಅಲ್ಲ ರಾಷ್ಟ್ರದ ಬಿಜೆಪಿಯ ಕುಮ್ಮಕ್ಕಿನಿಂದ ಈ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಸರ್ಕಾರವನ್ನು ಬೀಳಿಸುವ ಪ್ರಯತ್ನ ಇದು 6ನೇಯದಾಗಿದ್ದು, ಬಿಜೆಪಿಯವರು ಈ ಬಾರಿ ಹೊಸ ನಾಟಕವಾಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಶಾಸಕರು ಅವರೇ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ನಾವು ಸನ್ಯಾಸಿಗಳಲ್ಲ, ನಾವು ಅಧಿಕಾರ ನಡೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬಾರಿಯೂ ಅವರು ವಿಫಲರಾಗುತ್ತಾರೆ. ಇದರಲ್ಲಿ ಅವರಿಗೆ ಯಾವುದೇ ರೀತಿಯ ಯಶಸ್ಸು ಸಿಗಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದಾಯ ತೆರಿಗೆ ಇಲಾಖೆ(ಐಟಿ), ಜಾರಿ ನಿರ್ದೇಶನಾಲಯ(ಇಡಿ)ವನ್ನು ಬಳಸಿಕೊಂಡು ಹಣದ ಆಮಿಷವೊಡ್ಡಿ ನಮ್ಮ ಶಾಸಕರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಯಾವತ್ತೂ ಇಂತಹ ಕೆಲಸ ಮಾಡಿಲ್ಲ. ಹೀಗಾಗಿ ಈ ಪ್ರಯತ್ನ ಸಫಲವಾಗಲ್ಲ. ಸಮ್ಮಿಶ್ರ ಸರ್ಕಾರ ಉಳಿಯುತ್ತದೆ. ಹಾಗೂ ಮುಂದುವರಿಯುತ್ತದೆ ಎಂದು ಮಾಜಿ ಸಿಎಂ ಬಿಜೆಪಿ ವಿರುದ್ಧ ಕಿಡಿಕಾರುವ ಮೂಲಕ ಭರವಸೆ ನೀಡಿದ್ದಾರೆ.