ನವದೆಹಲಿ: ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಸಲ್ಲಿಕೆ ಮಾಡಿದೆ.
ಕೇರಳ ಮತ್ತು ಕರ್ನಾಟಕ ನಡುವಿನ ಸಂಚಾರಕ್ಕೆ ಕೇಂದ್ರ ಸರ್ಕಾರ ಅಫಿಡೆಟಿವ್‍ನಲ್ಲಿ ಪರ್ಯಾಯ ರಸ್ತೆ ಮಾರ್ಗ ರಚನೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಕರ್ನಾಟಕ ರಾಜ್ಯ ಹೆದ್ದಾರಿ 89 ಮತ್ತು 90ರ ಮೂಲಕ ಕೇರಳ ತಲುಪಬಹುದಾಗಿದ್ದು, ಎಸ್‍ಎಚ್ 89 ಮಡಿಕೇರಿ, ಗೋಣಿಕೊಪ್ಪ, ಕುಟ್ಟಾ ಮೂಲಕ ಕೇರಳ ತಲುಪಬಹುದಾಗಿದೆ. ಅಲ್ಲದೇ ಎಸ್‍ಎಚ್ 90 ಹುಣಸೂರು ನಿಂದ ತಲಕಾವೇರಿ ಮಾರ್ಗ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 211 ಕಿಲೋ ಮೀಟರ್ ಪರ್ಯಾಯ ಮಾರ್ಗ ಸೂಚಿಸಿದೆ. ಇತ್ತ ಕೇರಳ ಭಾಗ ಪ್ರವೇಶಕ್ಕೆ ಜಿಲ್ಲಾ ಹೆದ್ದಾರಿ ಬಳಸಿ ವೈಯನಾಡು ತಲುಪಬಹುದಾಗಿದೆ.
Advertisement
Advertisement
ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಲಾಗಿದ್ದು, ಈ ಕ್ರಮವನ್ನು ರದ್ದುಪಡಿಸಬೇಕು ಎಂದು ತಮಿಳುನಾಡು ಸರ್ಕಾರ ಒತ್ತಾಯ ಮಾಡಿತ್ತು. ಅಲ್ಲದೇ ವಯನಾಡು ಸಂಸದ ರಾಹುಲ್ ಗಾಂಧಿ ಅವರು ಕೂಡ ವಯನಾಡಿನಲ್ಲಿ ನಡೆದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.
Advertisement
ದೇಶದ 50ಕ್ಕೂ ಹೆಚ್ಚು ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶವಿದೆ. ಆದರೆ ಬಂಡೀಪುರದಲ್ಲಿ ಮಾತ್ರ ರಾತ್ರಿ ಸಂಚಾರ ನಿಷೇಧ ಮಾಡಲಾಗಿದೆ ಎಂದು ಕೇರಳ ಸರ್ಕಾರ ವಾದ ಮುಂದಿಟ್ಟಿತ್ತು. 2009ರಲ್ಲಿ ರಾಜ್ಯ ಸರ್ಕಾರ ಬಂಡೀಪುರ ಅಭಯಾರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6ರ ವರೆಗೂ ಸಂಚಾರ ನಿಷೇಧ ಮಾಡಿ ಆದೇಶ ನೀಡಿತ್ತು. ಹುಲಿ, ಕಾಡೆಮ್ಮೆ, ಆನೆ ಸೇರಿದಂತೆ ಆನೇಕ ಕಾಡು ಪ್ರಾಣಿಗಳು ರಾತ್ರಿ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿದ್ದರಿಂದ ಸರ್ಕಾರ ನಿಷೇಧವನ್ನು ಜಾರಿ ಮಾಡಿತ್ತು. ಬಂಡೀಪುರವನ್ನು ಹಾದುಹೋಗುವ ಹೆದ್ದಾರಿಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 275 ಮತ್ತು ರಾಜ್ಯ ಹೆದ್ದಾರಿ 90 ಅನ್ನು ಸೂಚಿಸಲಾಗಿತ್ತು.