ಮಂಗಳೂರು: ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳು ಇಂದು ಸುರತ್ಕಲ್ ಮತ್ತು ಕಾಟಿಪಳ್ಳ ಬಂದ್‍ಗೆ ಕರೆ ಕೊಟ್ಟಿವೆ.
Advertisement
ಸುರತ್ಕಲ್ ಕೋಮು ಸೂಕ್ಷ್ಮತೆಯ ಪ್ರದೇಶವಾಗಿದ್ದು, ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಜೊತೆಗೆ ಬುಧವಾರ ರಾತ್ರಿಯಿಂದ ಇಂದು ರಾತ್ರಿ 10 ಗಂಟೆಯವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಆಕ್ಟ್ 35ರ ಪ್ರಕಾರ ನಿರ್ಬಂಧಕಾಜ್ಞೆ ಜಾರಿ ಮಾಡಲಾಗಿದೆ. ನಿರ್ಬಂಧಕಾಜ್ಞೆ ಯ ಪ್ರಕಾರ ಸಭೆ, ಮೆರವಣಿಗೆಗೆ ಅನುಮತಿ ಇಲ್ಲ. ಮಂಗಳೂರು ನಗರ ಪೊಲೀಸ್ ಕಮೀಷನರ್ ಟಿಆರ್ ಸುರೇಶ್ ನಿರ್ಬಂಧಕಾಜ್ಞೆ ಜಾರಿಗೊಳಿಸಿ ಆದೇಶ ನೀಡಿದ್ದಾರೆ.
Advertisement
Advertisement
ಪೊಲೀಸ್ ನಿರ್ಬಂಧದ ಹೊರತಾಗಿಯೂ ದೀಪಕ್ ಶವಯಾತ್ರೆ ನಡೆಸಲು ಹಿಂದೂ ಸಂಘಟನೆಗಳಿಂದ ಸಿದ್ಧತೆ ನಡೆದಿದೆ. ಬೆಳಗ್ಗೆ 10 ಗಂಟೆ ವೇಳೆಗೆ ದೀಪಕ್ ರಾವ್ ಶವಯಾತ್ರೆ ಆರಂಭವಾಗಲಿದ್ದು, ಎಜೆ ಆಸ್ಪತ್ರೆಯ ಶವಗಾರದಿಂದ ಕಾಟಿಪಳ್ಳದಲ್ಲಿರುವ ದೀಪಕ್ ಮನೆ ತನಕ ಯಾತ್ರೆ ಸಾಗಲಿದೆ. ಶವಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿರುವ ನಿರೀಕ್ಷೆ ಇದೆ. ಮಧ್ಯಾಹ್ನದ ವೇಳೆಗೆ ಸುರತ್ಕಲ್‍ನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
Advertisement
ಪ್ರಕರಣ ಸಂಬಂಧ ನೌಶಾದ್, ರಿಜ್ವಾನ್, ಪಿಂಕಿ ನವಾಜ್ ಹಾಗೂ ನಿರ್ಷಾನ್ ಎಂಬ ನಾಲ್ವರು ಆರೋಪಿಗಳನ್ನು ಮುಲ್ಕಿ ಮತ್ತು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರ ವಶಕ್ಕೆ ನೀಡುವ ವೇಳೆ ಪರಾರಿಯಾಗಲು ಯತ್ನಿಸಿದ್ದು, ರಿಜ್ವಾನ್ ಮತ್ತು ನೌಶಾದ್ ಕಾಲಿಗೆ ಗುಂಡು ಹಾರಿಸಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಏನಿದು ಪ್ರಕರಣ?: ಡೊಕೊಮೊ ಮೊಬೈಲ್ ಕಂಪನಿಯಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿದ್ದ ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ ಅವರನ್ನು ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಕಾರಿನಲ್ಲಿ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಕಲೆಕ್ಷನ್ ಹಣವನ್ನು ಅಂಗಡಿಗೆ ಕೊಟ್ಟು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದವರು ಬೈಕನ್ನು ಅಡ್ಡಗಟ್ಟಿ ಮೂಡಾಯಿಕೋಡಿ ಎಂಬಲ್ಲಿ ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದರು.
ಕೊಲೆ ಮಾಡಿ ಸ್ವಿಫ್ಟ್ ಕಾರಿನಲ್ಲಿ ಮೂಡುಬಿದಿರೆ ಮೂಲಕ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮೂಲ್ಕಿ ಸಬ್ ಇನ್ಸ್ ಪೆಕ್ಟರ್ ಶೀತಲ್ ಕುಮಾರ್ ಸಿನಿಮೀಯ ರೀತಿ ಬೆನ್ನಟ್ಟಿ ಮಿಜಾರು ಎಂಬಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ. ಪೂರ್ವ ದ್ವೇಷದಿಂದ ಕೃತ್ಯ ನಡೆದಿರುವ ಶಂಕೆಯಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹೇಳಿಕೆ ನೀಡಿದ್ದಾರೆ. ಕೊಲೆ ನಡೆದ ಬಳಿಕ ಸುರತ್ಕಲ್‍ನಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ ಮೇಲೆ ಕಲ್ಲು ಎಸೆದಿದ್ದು, ಬಸ್ಸಿನ ಮುಂದಿನ ಗಾಜು ಪುಡಿಪುಡಿಯಾಗಿದೆ.