ಬೆಂಗಳೂರು: ಸರ್ಕಾರಿ ಕಚೇರಿಯಲ್ಲಿ ಮೊಬೈಲ್ ಚಿತ್ರೀಕರಣಕ್ಕೆ ನಿರ್ಬಂಧ ವಿಧಿಸಿ ಜಾರಿ ಮಾಡಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ರಾಜ್ಯ ಸರ್ಕಾರಕ್ಕೆ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಶುಕ್ರವಾರ ಮಧ್ಯಾಹ್ನ ಜಾರಿ ಮಾಡಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ತಡರಾತ್ರಿ ವಾಪಸ್ ಪಡೆದಿದೆ. ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ವೀಡಿಯೋ ನಿರ್ಬಂಧಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರದ ನಡೆಗೆ ಪ್ರತಿಪಕ್ಷಗಳಿಂದ ಹಿಡಿದು ಸಾರ್ವಜನಿಕರು ಟೀಕಿಸಿದ್ದರು. ಈ ಟೀಕೆಯ ಬೆನ್ನಲ್ಲೇ ಸರ್ಕಾರ ಆದೇಶವನ್ನು ವಾಪಸ್ ಪಡೆದುಕೊಂಡಿದೆ. ಇದನ್ನೂ ಓದಿ: ನನ್ನ ಪತಿ ಹಂತಕರ ತಲೆ ಕಡಿದವ್ರಿಗೆ 10 ಕೋಟಿ- ನಾಜೀಮಾ ಖಾನ್ ಘೋಷಣೆ
ಆದೇಶ ಪ್ರತಿಯಲ್ಲಿ ಏನಿತ್ತು..?
ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕು ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅವರವರ ಕೆಲಸ ಕಾರ್ಯಗಳ ನಿಮಿತ್ತ ಅಲ್ಲಿಗೆ ಆಗಮಿಸುವುದು ಸರ್ವೇ ಸಾಮಾನ್ಯ. ಆದರೆ ಕೆಲ ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಬಂದು ಫೋಟೋ, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ.
ಇದರಿಂದ ಇಲಾಖೆ ಹಾಗೂ ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ಹಾಗೂ ವೀಡಿಯೋ ತೆಗೆಯುವುದನ್ನು ನಿಷೇಧಿಸುವಂತೆ ಅಧಿಕೃತವಾಗಿ ಆದೇಶ ಹೊರಡಿಸಿದೆ.