ಉಡುಪಿ: ಗೋವು ರಕ್ಷಣೆಯ ಹೆಸರಿನಲ್ಲಿ ಅಟ್ಟಹಾಸ ಸಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ಕಟು ಟೀಕೆ ಮಾಡಿದ್ದರು. ಆದ್ರೆ ಗೋರಕ್ಷಣೆಯ ನೆಪದಲ್ಲಿ ಮಾಡುವ ದಾಳಿಗಳ ಸಂಖ್ಯೆ ಕಮ್ಮಿಯಾಗಿಲ್ಲ. ಎಮ್ಮೆಗಳನ್ನು ಸಾಗಿಸುತ್ತಿದ್ದ ಇಬ್ಬರನ್ನ ಬಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿ ಮನಬಂದಂತೆ ಥಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಬೆಳ್ಮಣ್ಣು ಸಮೀಪದ ಮುಂಡ್ಕೂರಿನಲ್ಲಿ ಎರಡು ದಿನದ ಹಿಂದೆ ಈ ಘಟನೆ ನಡೆದಿದೆ. ಸಾಧು ಪೂಜಾರಿ ಎಂಬವರು ಪಂಚಾಯತ್ ಪರವಾನಿಗೆ ಪಡೆದು, ಪಶುವೈದ್ಯರ ಸರ್ಟಿಫಿಕೇಟ್ ತೆಗೆದುಕೊಂಡು ಎಮ್ಮೆ ಮತ್ತು ಕರುವನ್ನು ಸಾಗಾಟ ಮಾಡುತ್ತಿದ್ದರು. ರಾಜೇಶ್ ಮೆಂಡೋನ್ಸ ಎಂಬವರ ಟೆಂಪೋದಲ್ಲಿ ಮೂಲ್ಕಿ ಕಡೆ ಹೋಗುತ್ತಿದ್ದಾಗ ಎಂಟತ್ತು ಮಂದಿ ಅಡ್ಡಗಟ್ಟಿದ್ದಾರೆ. ಪಂಚಾಯತ್ ಪರವಾನಿಗೆ ಇದೆ, ಇದನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿಲ್ಲ ಎಂದು ಹೇಳಿದರೂ ಇಬ್ಬರಿಗೂ ಮನಬಂದಂತೆ ಥಳಿಸಿದ್ದಾರೆ.
Advertisement
Advertisement
ಎಮ್ಮೆ ಮತ್ತು ಕರುವನ್ನು ಮೂಲ್ಕಿಯ ಚಂದ್ರ ಶೆಟ್ಟಿ ಎಂಬವರಿಗೆ ಮಾರಾಟ ಮಾಡಲು ಸಾಧು ಪೂಜಾರಿ ಹೊರಟಿದ್ದರು. ಇದನ್ನು ಕೇಳದೆ ಅವರಿಗೆ ಥಳಿಸಿದ ಬಜರಂಗದಳ ಕಾರ್ಯಕರ್ತರು ಕಾರ್ಕಳ ಗ್ರಾಮಾಂತರ ಪೊಲೀಸರನ್ನು ಕರೆಸಿ ಒಪ್ಪಿಸಿದ್ದಾರೆ.
Advertisement
ಆದ್ರೆ ಪರವಾನಿಗೆ ಇದ್ದರೂ ಸಾಧು ಪೂಜಾರಿ ಮತ್ತು ರಾಜೇಶ್ ಮೆಂಡೋನ್ಸಾ ಮೇಲೆಯೇ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಧು ಪೂಜಾರಿ ಮತ್ತು ರಾಜೇಶ್ ಮೆಂಡೋನ್ಸಾ ಮನೆಯವರು ಉಡುಪಿ ಎಸ್.ಪಿ ಕಚೇರಿಗೆ ಬಂದು ಸಂಘಟನೆಯ ಕಾರ್ಯಕರ್ತರ ವಿರುದ್ಧ ದೂರು ದಾಖಲು ಮಾಡುವಂತೆ, ನಿರಪರಾಧಿಗಳ ವಿರುದ್ಧದ ಕೇಸು ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ದೂರು ನೀಡಿದವರು ಆರೋಪ ಮಾಡಿದ್ದಾರೆ.
Advertisement
ಈ ಸಂದರ್ಭ ಸ್ಥಳೀಯ ಶುಭದ್ ರಾವ್ ಎಂಬವರು ಮಾತನಾಡಿ, ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ಮಾಡಬೇಕು. ಅಮಾಯಕರ ಮೇಲೆ ದಾಖಲಿಸಿರುವ ಕೇಸನ್ನು ವಾಪಾಸ್ ಪಡೆಯಬೇಕು. ಗ್ರಾಮಪಂಚಾಯತ್ ಪರವಾನಿಗೆ ಇದ್ದರೂ ಪೊಲೀಸರು ಮತ್ತು ಸಂಘಟನೆಯ ಕಾರ್ಯಕರ್ತರು ಕಾನೂನನ್ನು ಮೀರಿದ್ದಾರೆ ಎಂದು ಆರೋಪಿಸಿದರು.