ಬಾಗಲಕೋಟೆ: ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥವಾಗಿದ್ದಕ್ಕೆ ರೊಚ್ಚಿಗೆದ್ದ ಪ್ರಿಯಕರನೊಬ್ಬ ಕತ್ತು ಹಿಸುಕಿ ಯುವತಿಯನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ತೆಗ್ಗಿ ತಾಂಡಾ ನಡೆದಿದೆ.
ಕೊಲೆಯಾದ ಯುವತಿಯನ್ನು ತೆಗ್ಗಿ ತಾಂಡಾದ ನಿವಾಸಿ 22 ವರ್ಷದ ಮಂಜುಳ ಲಮಾಣಿ ಎಂದು ಗುರುತಿಸಲಾಗಿದೆ. ಲಮಾಣಿಯನ್ನು ಪ್ರೀತಿಸುತ್ತಿದ್ದ ಅವನೆಪ್ಪ ಕಳಸಣ್ಣವರ ಯವತಿ ಬೇರೆಯವರ ಜೊತೆ ಮದುವೆಯಾಗುತ್ತಾಳೆ ಎಂದು ಕತ್ತುಹಿಸುಕಿ ಕೊಲೆ ಮಾಡಿದ್ದಾನೆ.
ಅವನೆಪ್ಪ ಕಳಸಣ್ಣವರ ಮೂರು ವರ್ಷಗಳಿಂದ ಲಮಾಣಿಯನ್ನು ಪ್ರೀತಿಸುತ್ತಿದ್ದ. ಆದರೆ ಲಮಾಣಿ ಮನೆಯವರು ಆಕೆಗೆ ಬೇರೆ ಯುವಕನ ಜೊತೆ ನಿಶ್ಚಿತಾರ್ಥ ಮಾಡಿದ್ದಾರೆ. ತನ್ನನ್ನು ಪ್ರೀತಿಸಿ ಬೇರೊಬ್ಬನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಆಕ್ರೋಶಗೊಂಡ ಕಳಸಣ್ಣವರ ಇಂದು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.