ಬಾಗಲಕೋಟೆ: ಪೊಲೀಸ್ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿ ಎಂದು ಕರೆ ಮಾಡಿ ಮೋಸ ಮಾಡ್ತಿದ್ದ ವ್ಯಕ್ತಿಯನ್ನು ಜಮಖಂಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿ ಎಂದು ಕಚೇರಿಗಳಿಗೆ ಭೇಟಿ ನೀಡಿ ನನಗೆ ಐಬಿ ವ್ಯವಸ್ಥೆ ಮಾಡಿ ಎಂದು ಹೇಳಿ ಪೊಲೀಸರಿಗೆ ವಂಚಿಸಿ ಮೋಸ ಮಾಡುತ್ತಿದ್ದ, ಅಪ್ಪಯ್ಯ ಹಿರೇಮಠ ಎಂಬುವನೇ ಬಂಧಿತ ಆರೋಪಿಯಾಗಿದ್ದಾನೆ. ಈತನು ತಾನು ಲೋಕಾಯುಕ್ತ ಇಲಾಖೆಯಲ್ಲಿ ನೌಕರಿ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದನು. ಆದರೆ ಅನುಮಾನಗೊಂಡ ಪೊಲೀಸರು ಈತನ ಮೇಲೆ ನಿಗಾ ಇಟ್ಟಿದರು.
ಸರ್ಕಾರಿ ನೌಕರರನ್ನು ಹೆದರಿಸಿ ಹಣ ಸುಲಿಗೆ ಮಾಡಿ ಅವರ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಐಬಿಗೆ ಭೇಟಿ ನೀಡಿ ನನ್ನನ್ನು ಲೋಕಾಯುಕ್ತರು ಕಳಿಸಿದ್ದು, ರೂಮ್ ಕೊಡಲು ತಿಳಿಸಿದ್ದಾರೆ ಎಂದು ಎರು ಧ್ವನಿಯಲ್ಲಿ ಮಾತನಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೊನೆಗೆ ಅಪ್ಪಯ್ಯನ ವರ್ತನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಜಮಖಂಡಿ ಶಹರ ಪಿ.ಎಸ್.ಐ ಗೋವಿಂದಗೌಡ ಪಾಟೀಲ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ.
ನಂತರ ಮಾಹಿತಿ ಕಲೆ ಹಾಕಿದಾಗ ಈತ ನಕಲಿ ಲೋಕಾಯುಕ್ತ ಎಂದು ತಿಳಿದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಶಿವಮೊಗ್ಗ, ಹುಕ್ಕೇರಿ, ಹಿಡಕಲ್ ಡ್ಯಾಂಗಳಲ್ಲಿ ಸೇರಿದಂತೆ ವಿವಿಧ ನಗರಗಳಲ್ಲಿ ಪೊಲೀಸರಿಗೆ ವಂಚಿಸಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಕೈಕೊಂಡಿರುವುದಾಗಿ ಪಿ.ಎಸ್.ಐ ಗೋವಿಂದಗೌಡ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗಳಾದ ಮಲ್ಲು ಕೋಲಾರ, ಶೇಗುಣಸಿ, ಶಿವಾನದ್ ರಾಠೋಡ ಇತರರಿದ್ದ ಸಿಬ್ಬಂದಿ ತಂಡ ಬಲೆ ಬೀಸಿ ನಕಲಿ ಅಧಿಕಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿ ಅಪ್ಪಯ್ಯ ಹಿರೇಮಠ್ ಮೇಲೆ ಚೀಟಿಂಗ್ ಸೇರಿದಂತೆ ವಿವಿಧ ಸೆಕ್ಷನ್ ಅಡಿ ಕೇಸ್ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.