ಮುಂಬೈ: ಬದ್ಲಾಪುರದಲ್ಲಿ ಇಬ್ಬರು ನರ್ಸರಿ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಆರೋಪಿ ಅಕ್ಷಯ್ ಶಿಂಧೆ, ಪೊಲೀಸ್ ಅಧಿಕಾರಿಯೊಬ್ಬರ ಗನ್ ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದು ಆರೋಪಿ ಸಾವನ್ನಪ್ಪಿದ್ದಾನೆ.
ಅಕ್ಷಯ್ ಶಿಂಧೆ ಥಾಣೆಯ ಶಾಲೆಯಲ್ಲಿ ಅಟೆಂಡರ್ ಆಗಿದ್ದು, ಶಾಲೆಯ ಶೌಚಾಲಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಗಸ್ಟ್ 17 ರಂದು ಆತನನ್ನು ಬಂಧಿಸಲಾಗಿತ್ತು.
ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದ ಬಾಂಬೆ ಹೈಕೋರ್ಟ್ (High Court), ಪೊಲೀಸ್ ತನಿಖೆಯನ್ನು ಕಟುವಾಗಿ ಟೀಕಿಸಿತ್ತು. ಅಲ್ಲದೇ ಕಾನೂನಿನ ಆದೇಶವನ್ನು ಬದ್ಲಾಪುರ ಪೊಲೀಸರು ಅನುಸರಿಸುತ್ತಿಲ್ಲ. ಸಂತ್ರಸ್ತೆ ಮತ್ತು ಆಕೆಯ ಪೋಷಕರ ಹೇಳಿಕೆ ದಾಖಲಿಸಲು ಪೊಲೀಸ್ ಠಾಣೆಗೆ ಬರುವಂತೆ ಹೇಳುವುದು ಸರಿಯಾದ ಕ್ರಮವಲ್ಲ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಪೊಲೀಸರ ನಡೆಯ ವಿರುದ್ಧ ಚಾಟಿ ಬೀಸಿತ್ತು.
ನಂತರ ಸರ್ಕಾರವು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ ಅರ್ತಿ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.
ಈ ಸಂಬಂಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಪ್ರತಿಕ್ರಿಯಿಸಿದ್ದು, ಅಕ್ಷಯ್ ಶಿಂಧೆಯ ಮಾಜಿ ಪತ್ನಿ ಲೈಂಗಿಕ ದೌರ್ಜನ್ಯದ ದೂರು ದಾಖಲಿದ್ದರು. ಈ ಸಂಬಂಧ ಪೊಲೀಸರು ಆತನನ್ನು ತನಿಖೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಆತ ಪೊಲೀಸರ ಬಂದೂಕನ್ನು ಕಸಿದುಕೊಂಡು ಸಿಬ್ಬಂದಿ ಮೇಲೆ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆತ್ಮರಕ್ಷಣೆಗಾಗಿ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಆತ ಸಾವಿಗೀಡಾಗಿದ್ದಾನೆ. ಪೊಲೀಸರ ಮೇಲೆ ಹಲ್ಲೆ ನಡೆಸಿದರೆ, ಪೊಲೀಸರು ಆತ್ಮರಕ್ಷಣೆ ಮಾಡಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ಪ್ರತಿಪಕ್ಷಗಳು ಆತನನ್ನು ನೇಣು ಹಾಕುವಂತೆ ಕೇಳಿಕೊಳ್ಳುತ್ತಿದ್ದವು ಎಂಬುದನ್ನು ಅವರು ಹೇಳಿದ್ದಾರೆ.