ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಮೈತ್ರಿ ಸಾಧಿಸಲು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮತ್ತೆ ಭೇಟಿಯಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಿ ಸರ್ಕಾರ ರಚಿಸಲು ಚಂದ್ರಬಾಬು ನಾಯ್ಡು ಸಿದ್ಧತೆ ನಡೆಸಿದ್ದಾರೆ. ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಬಿಜೆಪಿ ವಿರೋಧಿ ಒಕ್ಕೂಟ ರಚನೆ ಬಗ್ಗೆ ಚರ್ಚಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಕೇಳಿಬಂದಿದೆ.
ಚಂದ್ರಬಾಬು ನಾಯ್ಡು ಅವರು ನಿನ್ನೆಯಷ್ಟೇ ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿ, ಕೇಂದ್ರದಲ್ಲಿ ಸರ್ಕಾರ ಮೈತ್ರಿ ರಚನೆಯ ಕುರಿತು ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಇಂದು ದೆಹಲಿಗೆ ಮರಳಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೂಡ ಭೇಟಿಯಾಗಿದ್ದಾರೆ.
ದೆಹಲಿಗೆ ಶುಕ್ರವಾರ ಆಗಮಿಸಿದ ಚಂದ್ರಬಾಬು ನಾಯ್ಡು ಅವರು ಬಿಜೆಪಿ ವಿರೋಧಿ ಪಕ್ಷಗಳ ನಡುವೆ ಮೈತ್ರಿ ಬೆಸೆಯುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಅವರೊಂದಿಗೆ ಎರಡು ಬಾರಿ ನೇರಾನೇರ ಚರ್ಚೆ ಮಾಡಿದ್ದಾರೆ. ಶನಿವಾರ ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ ತೆರಳಿ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ನಾಯಕರಿಗೆ ತಲಾ ಒಂದು ಬಾಕ್ಸ್ ಮಾವಿನ ಹಣ್ಣು ನೀಡಿದ್ದರು. ಇತ್ತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆಗೆ ಈಗಾಗಲೇ ದೂರವಾಣಿ ಮುಖಾಂತರ ಮಾತುಕತೆ ಮುಗಿಸಿದ್ದಾರೆ ಎಂದು ವರದಿಯಾಗಿದೆ.
2018ರ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆಗ ಬಿಜೆಪಿಗೆ ಒಂದು ಕ್ಷಣವೂ ಅವಕಾಶ ಕೊಡದಂತೆ ಕಾರ್ಯಾಚರಣೆಗಿಳಿದ ಕಾಂಗ್ರೆಸ್ ನಾಯಕರು, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಈಗ ಕೇಂದ್ರದಲ್ಲಿ ಇದೇ ಮಾದರಿಯನ್ನು ಅನುಸರಿಸುವ ತಯಾರಿ ನಡೆದಿದೆ.