ಬಿ.ಆರ್ ರಾಜಶೇಖರ್ (BR Rajashekhar) ನಿರ್ದೇಶನದ `ಬ್ಯಾಕ್ ಬೆಂಚರ್ಸ್’ (Back Benchers) ಚಿತ್ರವೀಗ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಕೆಲ ದಿನಗಳ ಹಿಂದಷ್ಟೇ ಟೀಸರ್ ಬಿಡುಗಡೆಗೊಂಡಿತ್ತು. ಆ ಮೂಲಕ ಬ್ಯಾಕ್ ಬೆಂಚರ್ಸ್ ಬಗ್ಗೆ ದೊಡ್ಡ ಮಟ್ಟದಲ್ಲೊಂದು ಕ್ರೇಜ್ ಮೂಡಿಕೊಂಡಿದೆ. ಅದರಲ್ಲಿದ್ದ ನವಿರಾದ ಹಾಸ್ಯ, ಕಾಲೇಜು ಲೈಫಿನ ಲವಲವಿಕೆಯ ಕಥಾನಕದ ಮುನ್ಸೂಚನೆಗಳೆಲ್ಲ ಫಲ ಕೊಟ್ಟಿದ್ದವು. ಈವರೆಗೆ ಬಂದಿರುವ ಕಾಲೇಜು ಕೇಂದ್ರಿತ ಕಥೆಗಳಲ್ಲಿ ಈ ಸಿನಿಮಾ ಭಿನ್ನವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದಿದೆ. ಸದರಿ ಟೀಸರಿನಲ್ಲಿ ಅದಕ್ಕೆ ಸ್ಪಷ್ಟ ಪುರಾವೆಗಳು ಸಿಕ್ಕಿದ್ದವು. ಹಾಗೆ ಬ್ಯಾಕ್ ಬೆಂಚರ್ಸ್ ಕಡೆಗೆ ಆಕರ್ಷಿತರಾಗಿದ್ದ ಪ್ರೇಕ್ಷಕರಿಗೆಲ್ಲ ಈಗ ಮತ್ತೊಂದು ಖುಷಿ ಎದುರಾಗಿದೆ. ಮತ್ತದೇ ಲವಲವಿಕೆ ಹೊದ್ದ 4ಕೆ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ.
ಎಲ್ಲೊ ಎಲ್ಲೊ ಎಲ್ಲೋ ಸಾಗುವಾಗ ನಿಲ್ಲೊ ನಿಲ್ಲೊ ನಿಲ್ಲೋ ಚಿಂತೆ ಏಕೆ ಅಂತ ಶುರುವಾಗೋ ಈ ಹಾಡು ಒಂದಿಡೀ ಚಿತ್ರದ ಆತ್ಮವನ್ನು ಧರಿಸಿಕೊಂಡಂತೆ ಮೂಡಿ ಬಂದಿದೆ. ಸಾಮಾನ್ಯವಾಗಿ ಕಾಲೇಜು ದಿನಮಾನದಲ್ಲಿ ಬದುಕಲ್ಲೆದುರಾಗೋ ಸಮಸ್ಯೆಗಳನ್ನು ಎದುರುಗೊಳ್ಳುವ ರೀತಿಯೇ ಬೇರೆಯದ್ದಿರುತ್ತದೆ. ಎಂಥಾದ್ದೇ ಸಮಸ್ಯೆ ಬಂದು ಎದೆಗೊದ್ದಾಗಲೂ ಪುಟಿದೆದ್ದು ನಿಲ್ಲೋ ಟೀನೇಜಿನ ಹುರುಪಿದೆಯಲ್ಲಾ? ಅದೆಲ್ಲವನ್ನು ಅರೆದು ತಯಾರಿಸಿದಂತಿರೋ ಈ ಹಾಡಿಗೀಗ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆಗಳು ಮೂಡಿಕೊಳ್ಳುತ್ತಿವೆ. ಧನಂಜಯ್ ರಂಜನ್ ಮತ್ತು ನಿಶ್ಚಲ್ ದಂಬೆಕೋಡಿ ಸಾಹಿತ್ಯವಿರುವ ಈ ಹಾಡಿಗೆನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಖುದ್ದು ನಕುಲ್ ಈ ಹಾಡನ್ನು ಹಾಡಿದ್ದಾರೆ.
ಪಿಪಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಸಂಪೂರ್ಣವಾಗಿ ಹೊಸಬರ ತಂಡವನ್ನಿಟ್ಟುಕೊಂಡು ರಾಜಶೇಖರ್ ಬ್ಯಾಕ್ ಬೆಂಚರ್ಸ್ ಚಿತ್ರವನ್ನು ರೂಪಿಸಿದ್ದಾರೆ. ಸಿದ್ಧಸೂತ್ರಗಳನ್ನು ಮೀರಿಕೊಂಡು ಹೊಸತೇನನ್ನೋ ಸೃಷ್ಟಿಸುವ ಹಂಬಲವೇ ಈ ಚಿತ್ರವನ್ನು ಭಿನ್ನವಾಗಿಸಿದೆ ಎಂಬುದು ನಿರ್ದೇಶಕರ ಮಾತು. ಇದುವೆರೆಗೂ ಕನ್ನಡದಲ್ಲಿ ಒಂದಷ್ಟು ಕಾಲೇಜು ಕಥೆಗಳು ದೃಷ್ಯರೂಪ ಧರಿಸಿವೆ. ಅದರಲ್ಲೊಂದಿಷ್ಟು ಗೆಲುವು ಕಂಡಿವೆ. ಆದರೆ, ಬ್ಯಾಕ್ ಬೆಂಚರ್ಸ್ ಅದ್ಯಾವುದರ ನೆರಳೂ ಇಲ್ಲದೆ, ಯಾವ ಕಲ್ಪನೆಗೂ ನಿಲುಕದಂತೆ ಮೂಡಿ ಬಂದಿದೆಯೆಂಬುದು ಚಿತ್ರತಂಡದ ಭರವಸೆ. ಹಾಡುಗಳು ಮತ್ತು ಟೀಸರ್ ನೋಡಿದವರಿಗೆಲ್ಲ ಅದು ನಿಜವೆನ್ನಿಸುವಂತಿದೆ.
ಪಿಪಿ ಪ್ರೊಡಕ್ಷನ್ಸ್ ಅಡಿಯಲ್ಲಿ ಖುದ್ದು ರಾಜಶೇಖರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಗಣವಿದೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ.