– ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2.53 ಕೋಟಿ ರೂ. ಉಳಿತಾಯ
ಮಂಡ್ಯ: ಜಿಲ್ಲೆಯಲ್ಲಿ (Mandya) 3.80 ಕೋಟಿ ವೆಚ್ಚದಲ್ಲಿ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಂ ಭವನ (Babu Jagjivanram Bhavan) ನಿರ್ಮಾಣ ಮಾಡಲಾಗುವುದು. ಅನುದಾನ ಕೊರತೆ ಉಂಟಾದರೆ ಹೆಚ್ಚುವರಿ ಅನುದಾನ ಪಡೆದು ಭವನವನ್ನು ನಿರ್ಮಾಣ ಮಾಡುತ್ತೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ (Chaluvarayaswamy) ಹೇಳಿದ್ದಾರೆ.
ಮಂಡ್ಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬಾಬು ಜಗಜೀವನ ರಾಂ ಅವರ 118ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ನಮ್ಮ ದೇಶ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಿದ ಮಹಾನೀಯರ ಕುರಿತು ಯುವ ಪೀಳಿಗೆಗೆ ಅರಿವು ಮೂಡಿಸುವ ಸಲುವಾಗಿ ಅನೇಕ ಸಾಧಕರ ಜಯಂತಿಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದಿದ್ದಾರೆ.
ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಯ ವಿಚಾರವಾಗಿ, ಗ್ಯಾರಂಟಿಯಿಂದ ರಾಜ್ಯದ ಪ್ರತಿ ಮನೆಗೂ 5,000 ರೂ. ತಲುಪುತ್ತಿದೆ. ಹಾಲಿನ ಮೇಲಿನ ಹೆಚ್ಚುವರಿಯಾಗಿ ನಿಗದಿಸಿರುವ 4 ರೂ. ರೈತರಿಗೆ ನೀಡಲಾಗುತ್ತಿದೆ. ಸಾರ್ವಜನಿಕರು ಯಾರ ಆಡಳಿತ ಅವಧಿಯಲ್ಲಿ ದೇಶದ ಅಭಿವೃದ್ಧಿ ಹಾಗೂ ಜನರಿಗೆ ಶಕ್ತಿಯನ್ನು ತುಂಬುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡಾಗ ಮಾತ್ರ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದ್ದಾರೆ.
– 2.53 ಕೋಟಿ ರೂ. ಉಳಿತಾಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2.53 ಕೋಟಿ ರೂ. ಉಳಿತಾಯ ಮಾಡಲಾಗಿದೆ. ಸರ್ಕಾರದಿಂದ ಬಿಡುಗಡೆಯಾದ 30 ಕೋಟಿ ರೂ. ಹಣದಲ್ಲಿ 29,65,07,226/- ರೂ. ವೆಚ್ಚವಾಗಿದ್ದು, ರೂ 34,92,774/- ಸರ್ಕಾರಕ್ಕೆ ಆದ್ಯಾರ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ವಾಣಿಜ್ಯ ಮಳಿಗೆಗಳ ಬಾಡಿಗೆ- 17,52,000/ ರೂ., ಪುಸ್ತಕ ಮಳಿಗೆಯ ಬಾಡಿಗೆ- 16,04,000 ರೂ., ನೊಂದಣಿ ಶುಲ್ಕ- 39,95,400 ರೂ., ಹೆಚ್.ಆರ್ ಎಂ.ಎಸ್ ವ್ಯಾಪ್ತಿಗೆ ಬಾರದ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- 23,11,944 ರೂ.-, ಹೆಚ್.ಆರ್ ಎಂ.ಎಸ್ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- 1,08,05,048/ ರೂ. -, ಎಂ.ಡಿಸಿ.ಸಿ ಬ್ಯಾಂಕ್- 10 ಲಕ್ಷ ರೂ. ಎಂ.ಆರ್.ಎನ್ ನಿರಾಣಿ ಫೌಂಡೇಷನ್ 5 ಲಕ್ಷ ರೂ. ಸೇರಿ ಒಟ್ಟು 2,53,61,166/ ರೂ. ಉಳಿತಾಯವಾಗಿದೆ ಎಂದಿದ್ದಾರೆ.
ಕನ್ನಡ ಭವನ ನಿರ್ಮಾಣ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸಿದ ನೆನಪಿಗಾಗಿ ಕನ್ನಡ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ದೇಣಿಗೆ ರೂಪದಲ್ಲಿ ಸಮಗ್ರಹವಾಗಿ ಉಳಿತಾಯವಾಗಿರುವ 2.5 ಕೋಟಿ ರೂ. ಹಣವನ್ನು ವೆಚ್ಚ ಮಾಡಲು ಯೋಜಿಸಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ ಬೇಕಿರುವ ಹೆಚ್ವುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದಿದ್ದಾರೆ.
ಜಿಲ್ಲಾಧಿಕಾರಿ ಡಾ: ಕುಮಾರ್ ಅವರು ಮಾತನಾಡಿ, 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಸಮಿತಿಗಳಿಂದ ಒಟ್ಟು ರೂ 29,65,07,226 ಅನುದಾನವನ್ನು ಬಳಕೆ ಮಾಡಲಾಗಿದೆ. ಯಾವೆಲ್ಲ ಕೆಲಸಗಳಿಗೆ ಎಷ್ಟು ವೆಚ್ಚವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.