Bengaluru City
ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!

ಬೆಂಗಳೂರು: ಸುಮನ್ ನಗರ್‍ಕರ್ ಪುನರಾಗಮನವಾಗುತ್ತಿದೆ ಎಂಬ ಕಾರಣದಿಂದಲೇ ಸುದ್ದಿ ಕೇಂದ್ರಕ್ಕೆ ಬಂದಿದ್ದ ಚಿತ್ರ ಬಬ್ರೂ. ಒಂದಷ್ಟು ಸಂಗತಿಗಳನ್ನು ಜಾಹೀರು ಮಾಡೋ ಮೂಲಕ ಚಿತ್ರತಂಡ ಬಬ್ರೂವಿನ ಬಗ್ಗೆ ಪ್ರೇಕ್ಷಕರೆಲ್ಲ ಗಮನ ಕೊಡುವಂತೆ ಮಾಡಿತ್ತು. ಒಂದೇ ನೋಟಕ್ಕೆ ಸೆಳೆಯುವಂತಹ ಪೋಸ್ಟರ್ ಗಳೊಂದಿಗೆ ತಾಜಾ ಅನುಭವ ನೀಡಿದ್ದ ಈ ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿತ್ತು. ಸಂಜಿತ್ ಹೆಗ್ಡೆ ಹಾಡಿದ್ದ ಈ ಹಾಡು ತನ್ನ ಮಾಧುರ್ಯದಿಂದ ಪ್ರಸಿದ್ಧಿ ಪಡೆಯೋದರ ಜೊತೆಗೆ ಬಬ್ರೂವನ್ನು ಕೂಡ ಮಿಂಚುವಂತೆ ಮಾಡಿತ್ತು. ಅದರ ಬಿಸಿ ಹಾಗೆಯೇ ಮುಂದುವರಿದಿರೋ ಈ ಹೊತ್ತಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಇದೊಂದು ಪಯಣದ ಕಥೆ ಅನ್ನಿಸುವಂತೆ ತೆರೆದುಕೊಂಡು ಮತ್ಯಾವುದೋ ಅಗೋಚರ ಕಥೆಯ ಹೊಳಪು ನೀಡುವಂತೆ ಮೂಡಿ ಬಂದಿರೋ ಈ ಟ್ರೇಲರ್ ಗೆ ಎಲ್ಲ ಕಡೆಯಿಂದಲೂ ಮೆಚ್ಚುಗೆ ಕೇಳಿ ಬರುತ್ತಿದೆ. ಅದಕ್ಕೆ ತಕ್ಕುದಾದ ಉತ್ತಮ ಪ್ರತಿಕ್ರಿಯೆಗಳೂ ಸಿಗುತ್ತಿವೆ. ಲವಲವವಿಕೆಯಿಂದಲೇ ಸಾಗೋ ಪಯಣದ ಕಥೆ ಸಸ್ಪೆನ್ಸ್ ಥ್ರಿಲ್ಲರ್ ಜಾಡಿನತ್ತ ಹೊರಳಿಕೊಳ್ಳುವ ಮೂಲಕ ಕುತೂಹಲವನ್ನು ನೋಡುಗರ ಮನಸ್ಸಿಗೆ ದಾಟಿಸಿ ಈ ಟ್ರೆಲರ್ ಸಮಾಪ್ತಿಯಾಗುತ್ತದೆ.
ಇದು ಸಂಪೂರ್ಣವಾಗಿ ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರೋ ಚಿತ್ರ. ಸುಜಯ್ ರಾಮಯ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಬ್ರೂ ಸುಮನ್ ನಗರ್‍ಕರ್ ಪ್ರೊಡಕ್ಷನ್ಸ್ ಮತ್ತು ಯುಗ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿ ಬಂದಿದೆ. ಸಂಪೂರ್ಣವಾಗಿ ಚಿತ್ರೀಕರಣ, ಕೆಲಸ ಕಾರ್ಯ ಮುಗಿಸಿಕೊಂಡಿರೋ ಬಬ್ರೂ ಇದೀಗ ಸಿನಿಮಾ ಮಂದಿರಗಳತ್ತ ಮುಖ ಮಾಡಿದೆ. ಬೆಳದಿಂಗಳ ಬಾಲೆ ಚಿತ್ರದಲ್ಲಿ ನಟಿಸಿ ಆ ಪಾತ್ರದ ಮೂಲಕವೇ ಇಂದಿಗೂ ಕನ್ನಡ ಪ್ರೇಕ್ಷಕರ ಮನಸ್ಸಲ್ಲಿ ಉಳಿದುಕೊಂಡಿರುವವರು ಸುಮನ್ ನಗರ್‍ಕರ್. ಅವರು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರದ ರೂಪುರೇಷೆಯೂ ಈ ಟ್ರೇಲರ್ ಮೂಲಕ ಅನಾವರಣಗೊಂಡಿದೆ.
ಮಾಹಿ ಹಿರೇಮಠ್, ರೇ ತೊಸ್ತಾಡೋ, ಸನ್ನಿ ಮೋಜಾ, ಪ್ರಕೃತಿ ಕಶ್ಯಪ್ ಮೊದಲಾದ ಕಲಾವಿದರು ಬಬ್ರೂ ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ ಸಂಗೀತದಲ್ಲಿ ಮೂಡಿ ಬಂದಿರೋ ಹಾಡು ಈಗಾಗಲೇ ಫೇಮಸ್ ಆಗಿದೆ. ಈಗಾಗಲೇ ಸಿನಿಮಾ ಲಾಂಚ್‍ನಲ್ಲಿ ಪ್ರದರ್ಶನಗೊಂಡಿರೋ ಈ ಚಿತ್ರವನ್ನು ನೋಡಿ ವಿದೇಶದಲ್ಲಿ ನೆಲೆಸಿರೋ ಕನ್ನಡಿಗರು ಖುಷಿಗೊಂಡಿದ್ದಾರೆ. ಈ ಮೂಲಕ ಬಹು ಕಾಲದ ನಂತರ ಮರಳಿರುವ ಸುಮನ್ ನಗರ್‍ಕರ್ ಮತ್ತೆ ಕನ್ನಡಿಗರ ಮನಮುಟ್ಟುವ ತವಕದಲ್ಲಿದ್ದಾರೆ.
