– ಮಹೇಶ್ ದೇವಶೆಟ್ಟಿ
ಬೆಂಗಳೂರು: ಎಲ್ಲರೂ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ ಸಮಯ ದಿ ಎಂಡ್‍ಗೆ ಬಂದಿದೆ. ಎರಡು ವರ್ಷಗಳನ್ನು ಎಣಿಸಿ ಎಣಿಸಿ ಕಳೆದ ಬಾಹುಬಲಿ ಅಭಿಮಾನಿಗಳಿಗೆ ಕೊನೆಗೂ ತಥಾಸ್ತು ಎಂದಿದ್ದಾರೆ ನಿರ್ದೇಶಕ ರಾಜಮೌಳಿ. ಮೊದಲ ದಿನ ಮೊದಲ ಶೋ ನೋಡಲು ಜನರು ತುದಿಗಾಲಲ್ಲಿ ನಿಂತಿದ್ದರು. ಅದರ ಫಲಿತಾಂಶ ಏನಾಗಿದೆ? ಬಾಹುಬಲಿ ಪಾರ್ಟ್ 2 ಜನರ ಮನಸನ್ನು ಗೆದ್ದನಾ? ಅಥವಾ ತಲೆ ತಗ್ಗಿಸುವಂತೆ ಮಾಡಿದನಾ? ಬಾಹುಬಲಿ 2 ಸಿನಿಮಾದ ಫಸ್ಟ್ ರಿಪೋರ್ಟ್ ನಿಮ್ಮ ಮುಂದೆ.
ಮೈಯನ್ನು ಆಚೆ ಈಚೆ ತಿರುಗಿಸಬಹುದು. ಕಾಲನ್ನು ಎತ್ತಿ ಇನ್ನೊಂದು ಕಾಲಿನ ಮೇಲೆ ಹಾಕಬಹುದು. ಆದರೆ ಒಂದನ್ನು ಮಾತ್ರ ಯಾರೂ ಅಲುಗಾಡಿಸುವುದಿಲ್ಲ, ಕ್ಷಣಕ್ಕೂ ಪಕ್ಕಕ್ಕೆ ತಿರುಗಿಸುವುದಿಲ್ಲ. ಅದನ್ನು ಕಣ್ಣು ಎಂದು ಕರೆಯುತ್ತಾರೆ. ಹಾಗೆ ಮಾಡುತ್ತಿದ್ದರೆ ಅವರು ಬಾಹುಬಲಿ 2 ನೋಡುತ್ತಿದ್ದಾರೆನ್ನುವುದು ಸತ್ಯಸ್ಯ ಸತ್ಯ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೀಗೊಂದು ಸಿನಿಮಾ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ ಎಸ್‍ಎಸ್ ರಾಜಮೌಳಿ. ಇದು ಬಾಹುಬಲಿಯನ್ನು ನೋಡಿದವರ ಒನ್ ಲೈನ್ ವಿಮರ್ಶೆ.
Advertisement
ಎಲ್ಲಿಂದ ಆರಂಭಿಸಬೇಕು? ಈ ಚಿತ್ರವನ್ನು ವಿಮರ್ಶೆ ಮಾಡುವವರಿಗೆ ಕಾಡುವ ಮೊದಲ ಪ್ರಶ್ನೆಯೂ ಇದೆ, ಕೊನೇ ಪ್ರಶ್ನೆಯೂ ಇದೆ. ಯಾಕೆಂದರೆ ಉಳಿದ ಯಾವುದೇ ಪ್ರಶ್ನೆಯನ್ನು ಕೇಳದಂಥ ಐತಿಹಾಸಿಕ ಕಮ್ ಜನಪದ ಕಥನವನ್ನು ಕಣ್ಣ ಮುಂದೆ ಹರವಿಟ್ಟಿದ್ದಾರೆ ರಾಜಮೌಳಿ. ಇದನ್ನು ನೋಡುತ್ತಾ ನೋಡುತ್ತಾ ಮೊದಲ ಭಾಗ ಮರೆತರೂ ಅಚ್ಚರಿ ಇಲ್ಲ. ಯಾಕೆಂದರೆ ಅದರಲ್ಲಿ ನೀವು ನೋಡಿದ್ದು ಕೇವಲ ಹತ್ತು ಪರ್ಸೆಂಟ್ ಹಂಗಾಮಾ. ಅದರೆ ಭಾಗ ಎರಡರಲ್ಲಿ ಪ್ರತಿ ಫ್ರೇಮೂ ಹಬ್ಬದಡುಗೆ ಸಂಭ್ರಮ. ಈ ಸೀನ್ ಸೂಪರ್ ಎನ್ನುವಷ್ಟರಲ್ಲಿ ಸೂಪರ್ ಡೂಪರ್ ಸೀನ್ ಎದ್ದು ನಿಂತಿರುತ್ತದೆ.
Advertisement
ಔಟ್ ಆಫ್ ದಿ ಬಾಕ್ಸ್: ಪ್ರೀತಿ, ಪ್ರಣಯ, ಕಾಮಿಡಿ, ಸೆಂಟಿಮೆಂಟು, ಸೇಡು, ದ್ವೇಷ, ಪ್ರತಿಕಾರ, ಹಠ, ಶಕ್ತಿ, ಯುಕ್ತಿ….. ಇವೆಲ್ಲವೂ ಸೇರಿದರೆ ಅಲ್ಲೊಂದು ಬಾಹುಬಲಿ ಜಗಮಗಿಸುತ್ತಾನೆ. ಹಾಗೆ ನೋಡಿದರೆ ಈ ರೀತಿಯ ಕತೆಗಳನ್ನು ಎಂಟು ಹತ್ತು ಸಾಲಿನಲ್ಲಿ ಹೇಳಬಹುದು. ಅದರೆ ಅದನ್ನು ನಿರೂಪಿಸುವ ಕಲ್ಪನಾತೀತ ದೃಶ್ಯಗಳಿವೆಯಲ್ಲ. ಅದನ್ನು ಊಹಿಸಲೂ ಸಾಧ್ಯ ಇಲ್ಲ. ಅಕಸ್ಮಾತ್ ಊಹಿಸಿಕೊಂಡರೂ ಅದನ್ನು ತೆರೆ ಮೇಲೆ ತರುವುದು ಸಾಧ್ಯವೇ? ಈ ಪ್ರಶ್ನೆ ರಾಜಮೌಳಿ ಕತೆ ಹೇಳಿದಾಗ ಸಂಬಂಧಪಟ್ಟವರಿಗೆ ತಲೆ ತಿಂದಿರುತ್ತದೆ. ಯಾಕೆಂದರೆ ಮೌಳಿಯ ಲೋಕವೇ ಔಟ್ ಆಫ್ ದಿ ಬಾಕ್ಸ್.
Advertisement
ಇದನ್ನೂ ಓದಿ:ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!
Advertisement
ಅದೆಂಥಾ ದೃಶ್ಯಗಳನ್ನು ಹೆಣೆದಿದ್ದಾರೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಒಂದು ಸ್ಯಾಂಪಲ್. ಶಿವಗಾಮಿ ದುಷ್ಟ ಸಂಹಾರ ಮಾಡಲು ವಿಗ್ರಹಕ್ಕೆ ಬೆಂಕಿ ಇಡಲು ಹೋಗುತ್ತಿರುತ್ತಾಳೆ. ಯಾರು ಅಡ್ಡ ಬಂದರೂ ಆಕೆ ನಿಲ್ಲಬಾರದು. ನಿಂತರೆ ರಾಜ್ಯದ ಸರ್ವನಾಶ ಗ್ಯಾರಂಟಿ ಎನ್ನುವುದು ಅವರ ನಂಬಿಕೆ. ಆಕೆ ತಲೆ ಮೇಲೆ ಬೆಂಕಿ ಕೆಂಡದ ಮಡಕೆ ಇಟ್ಟುಕೊಂಡು ನಡೆಯುತ್ತಿರುತ್ತಾಳೆ. ಆಗ ಹದಿನೈದು ಇಪ್ಪತ್ತು ಅಡಿಯ ದೈತ್ಯ ಆನೆ ಆಕೆಯನ್ನು ತುಳಿಯಲು ಬರುತ್ತದೆ. ಆಕೆ ಕದಲುವುದಿಲ್ಲ, ಅಂಜುವುದೂ ಇಲ್ಲ. ಆನೆಯನ್ನು ಯಾರು ತಡೆಯುತ್ತಾರೆಂದು ಎಲ್ಲರಿಗೂ ಗೊತ್ತು. ಅದರೆ ಹೇಗೆ ಅನ್ನೋದೇ ಕುತೂಹಲದ ತುತ್ತ ತುದಿ ಪ್ರಶ್ನೆ. ಆಗ ತೆರೆ ಮೇಲೆಲ್ಲಾ ಧೂಳು, ಏನಾಗುತ್ತಿದೆ ಎನ್ನುವಷ್ಟರಲ್ಲಿ ಪ್ರಭಾಸ್ ಒಂದು ತೇರನ್ನು ಎಳೆದುಕೊಂಡು ಫಸ್ಟ್ ಎಂಟ್ರಿ ಕೊಡುತ್ತಾರೆ. ಆನೆಗಿಂತ ಎತ್ತರವಾದ ಆ ತೇರನ್ನು ಅಡ್ಡ ನಿಲ್ಲಿಸುತ್ತಾರೆ. ಅದಕ್ಕೆ ಗುದ್ದಿದ ಆನೆ ನೆಲಕ್ಕೆ ಒರಗುತ್ತದೆ. ತೇರಿನ ಮೇಲೆರಿದರೆ ಅಲ್ಲಿರುತ್ತದೆ ಗಣೇಶನ ದೈತ್ಯ ವಿಗ್ರಹ, ಆನೆ ಮಂಡಿ ಊರುತ್ತದೆ. ಬಾಹುಬಲಿ ಅದರ ಸೊಂಡಿಲಿಂದ ಮೇಲೇರಿ ಬೆನ್ನ ಮೇಲೆ ನಿಲ್ಲುತ್ತಾನೆ. ಆನೆ ಸೊಂಡಿಲಿನಿಂದ ಬಿಲ್ಲನ್ನು ಹಿಡಿದುಕೊಂಡಿದ್ದರೆ, ಬಾಹುಬಲಿ ಅದರಿಂದಲೇ ಬಾಣವನ್ನು ಬಿಟ್ಟು ಆ ದುಷ್ಟ ಸಂಹಾರ ವಿಗ್ರಹಕ್ಕೆ ಬೆಂಕಿ ಇಡುತ್ತಾನೆ.
ಇದು ಕೇವಲ ಒಂದು ದೃಶ್ಯ. ಇಂಥ ಹಲವಾರು ಮೈನವಿರೇಳಿಸುವ ದೃಶ್ಯಗಳು ನಿಮ್ಮನ್ನು ಇಲ್ಲಿವರೆಗೆ ಕಾಣದ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಈ ಶತ್ರುಗಳನ್ನು ಹೇಗೆ ಸದೆ ಬಡಿಯುತ್ತಾನೊ, ಈ ಅಪಾಯದಿಂದ ಹೇಗೆ ಪಾರಾಗುತ್ತಾರೊ, ಇನ್ನೇನು ಕತೆ ಮುಗಿಯಿತು…ಈ ಅನಿಸಿಕೆಗಳು ಕೆಲವು ದೃಶ್ಯಗಳನ್ನು ನೋಡುವಾಗ ಮೂಡಿರುತ್ತವೆ. ಆದರೆ ಬಾಹುಬಲಿ ಎಲ್ಲವನ್ನೂ ಎಡಗೈಯಿಂದ ನಿಭಾಯಿಸುತ್ತಾನೆ. ಶಕ್ತಿಗಿಂತ ಯುಕ್ತಿಯೂ ನಾಯಕನಿಗೆ ಬೇಕು ಎಂದು ಸಾಬೀತುಪಡಿಸುತ್ತಾನೆ.
`ಬಾಹುಬಲಿ 2 ಸಿನಿಮಾ ಬಂದ ಮೇಲೆ ಭಾರತದ ಎಲ್ಲಾ ನಿರ್ದೇಶಕರನ್ನು ಜನರು ಟಿವಿ ಸೀರಿಯಲ್ ಡೈರೆಕ್ಟರ್ ಥರ ನೋಡ್ತಾರೆ…’ ಹೀಗಂತ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದರು. ಇದನ್ನು ನೋಡಿ ಹೊರ ಬಂದ ಮೇಲೆ ಆ ವ್ಯಕ್ತಿ ಹೇಳಿದ್ದರಲ್ಲಿ ಅತಿಶಯೋಕ್ತಿ ಇಲ್ಲ ಅನ್ನಿಸೋದು ಖಂಡಿತ. ರಾಜಮೌಳಿ ಸತತ ಐದು ವರ್ಷ ಇದಕ್ಕಾಗಿ ಬೆವರು ಹರಿಸಿಲ್ಲ, ರಕ್ತವನ್ನು ಬಸಿದು ಮೊಗೆ ಮೊಗೆದು ಸುರಿದಿದ್ದಾರೆ. ಅದು ಪ್ರತಿ ಫ್ರೇಮ್‍ನಲ್ಲಿ ಕಣ್ಣಿಗೆ ಕುಕ್ಕುತ್ತದೆ. ನಿಜಕ್ಕೂ ನಾವು ಸಿನಿಮಾ ನೋಡುತ್ತಿದ್ದೇವಾ ಅಥವಾ ಇನ್ಯಾವುದೊ ಕಾಲದಲ್ಲಿ ಬದುಕುತ್ತಿದ್ದೇವಾ ಎನ್ನುವ ಅನುಮಾನ ಹುಟ್ಟುವುದು ಇದರ ಗೆಲುವಿಗೆ ಮೊದಲ ಮತ್ತು ಅಂತಿಮ ಕಾರಣ.
ಬಾಹುಬಲಿಯ ಕತೆಯನ್ನು ಒಂದೇ ಸಾಲಿನಲ್ಲಿ ಹೇಳಿ ಮುಗಿಸಬಹುದು. ಇಬ್ಬರು ದಾಯಾದಿಗಳಲ್ಲಿ ಸಿಂಹಾಸನ ಯಾರ ಪಾಲಾಗುತ್ತದೆ? ಸಿಂಹಾಸನಕ್ಕಿಂತ ಕೊಟ್ಟ ಮಾತು ಮುಖ್ಯ ಎನ್ನುವ ಬಾಹುಬಲಿ, ಯಾರನ್ನು ಕೊಂದಾದರೂ ಸರಿ ಪಟ್ಟವನ್ನು ಪಡೆಯಬೇಕೆನ್ನುವ ಬಲ್ಲಾಳ ದೇವ. ಇದಕ್ಕಾಗಿ ನಡೆಯುವ ಸಂಚು, ಕುಯುಕ್ತಿ, ಸುಳ್ಳು…ಇದರ ಸುತ್ತ ಕತೆ ಸಾಗುತ್ತದೆ. ಅದು ಮುಖ್ಯ ಅಲ್ಲ. ಇಂಥ ಸರಳ ಕತೆಯನ್ನು ಎಷ್ಟು ಅದ್ಭುತವಾಗಿ ತೆರೆ ಮೇಲೆ ತೋರಿಸಿದ್ದಾರೆ ಅನ್ನೋದು ಮುಖ್ಯಾತಿ ಮುಖ್ಯ. ಒನ್ಸ್ ಅಗೇನ್ ರಾಜಮೌಳಿಯ ಕಲ್ಪನಾ ಲೋಕ ಎಲ್ಲರಲ್ಲಿ ಮಹಾ ಅಚ್ಚರಿ ಮೂಡಿಸುತ್ತದೆ.
ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?
ಅಣ್ಣಾವ್ರನ್ನ ನೆನಪಿಸ್ತಾರೆ ಪ್ರಭಾಸ್: ಬಾಹುಬಲಿಯಾಗಿ ಪ್ರಭಾಸ್ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಆ ದೈತ್ಯ ದೇಹಿ ಬರುತ್ತಿದ್ದರೆ ಅದ್ಯಾವುದೊ ಗ್ರೀಕ್ ಮ್ಯಾಚೋ ಮ್ಯಾನ್ ಖದರ್ ಕಾಣುತ್ತದೆ. ಬಾಡಿ ಲ್ವಾಂಗ್ವೆಜ್, ಡೈಲಾಗ್ ಡೆಲಿವರಿ, ಫೈಟಿಂಗ್ ಸೀಕ್ವೆನ್ಸ್, ಸೆಂಟಿಮೆಂಟ್ ಸೀನ್ಸ್, ರೊಮ್ಯಾಂಟಿಕ್ ಸಾಂಗ್ಸ್…ಉಹುಂ…ಯಾವುದಕ್ಕೂ ಮೋಸ ಮಾಡಿಲ್ಲ. ಆ ಪಾತ್ರಕ್ಕಾಗಿ ಪ್ರಭಾಸ್ ಪಟ್ಟ ಶ್ರಮ, ಮಾಡಿದ ಕಸರತ್ತು, ಹರಿಸಿದ ಬೆವರು ಪ್ರತಿ ದೃಶ್ಯದಲ್ಲಿ ಕಣ್ಣಿಗೆ ಹೊಡೆಯುತ್ತದೆ. ಈ ಪಾತ್ರದಲ್ಲಿ ಪ್ರಭಾಸ್ ಬಿಟ್ಟು ಇನ್ನೊಬ್ಬರನ್ನು ಊಹಿಸಲೂ ಸಾಧ್ಯ ಇಲ್ಲ. ಅಂದ ಹಾಗೆ ಕೆಲವು ದೃಶ್ಯಗಳಲ್ಲಿ ಪ್ರಭಾಸ್ ಅಣ್ಣಾವ್ರನ್ನ ನೆನಪಿಸುತ್ತಾರೆ. ಕತೆಗಾರ ವಿಜಯೇಂದ್ರ ಪ್ರಸಾದ್ ಕನ್ನಡದ ಮಯೂರ ನೋಡಿದ್ದು ಅದಕ್ಕೆ ಪ್ರೇರಣೇಯಾ? ಗೊತ್ತಿಲ್ಲ.
ಅನುಷ್ಕಾ ಫುಲ್ ರೋರಿಂಗ್: ಬಲ್ಲಾಳ ದೇವನಾಗಿ ರಾಣಾ ದಗ್ಗುಬಾಟಿ ಈಸ್ ಅಮೇಜಿಂಗ್. ಹೆಚ್ಚು ಮಾತಿಲ್ಲ. ಕಣ್ಣಿನಲ್ಲೇ ಎಲ್ಲವನ್ನೂ ಕಾರುವ ನಂಜಿನ ವಿಲನ್. ಅಧಿಕಾರಕ್ಕಾಗಿ ಹೆತ್ತ ಅಮ್ಮನನ್ನೇ ಕೊಲ್ಲಲು ತಯಾರಾಗುವ ಸಿಂಹಾಸನ ದಾಹಿಯಾಗಿ ಲೈಫ್ ಟೈಮ್ ಕೆಪಾಸಿಟಿ ತೋರಿಸಿದ್ದಾರೆ. ದೇವಸೇನಾ ಪಾತ್ರದ ಅನುಷ್ಕಾ ಶೆಟ್ಟಿ ಬಗ್ಗೆ ಕೆಮ್ಮಂಗಿಲ್ಲ. ಆಕ್ಷನ್, ರೊಮ್ಯಾನ್ಸ್, ಸೆಂಟಿಮೆಂಟ್ ಎಲ್ಲವನ್ನೂ ನುಂಗಿ ನೀರು ಕುಡಿದಿದ್ದಾರೆ. ಹರೆಯದ ಹುಡುಗಿಯಾಗಿ, ಮಹೇಂದ್ರ ಬಾಹುಬಲಿಯ ವೃದ್ಧೆ ತಾಯಿಯಾಗಿ ಅನುಷ್ಕಾ ಸೂಪರ್. ನಾಸರ್, ಕಟ್ಟಪ್ಪ ಅಗೇನ್ ಸ್ಕೋರ್ ಮಾಡಿದ್ದಾರೆ.
ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದೇಕೆ?: ಕಳೆದ ಎರಡು ವರ್ಷಗಳಿಂದ ಎಲ್ಲರ ಕಿವಿಗಳನ್ನು ಇಷ್ಟಗಲ ಬಿಟ್ಟುಕೊಂಡು ಓಡಾಡುವಂತೆ ಮಾಡಿದ್ದು ಒಂದೇ ಪ್ರಶ್ನೆ. ಅದೇ ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ? ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ಬೆಳಸಿದ ಕಟ್ಟಪ್ಪನಿಗೆ ಅಂಥ ಮನಸು ಬಂತಾದರೂ ಹೇಗೆ? ಅದಕ್ಕೆ ಯಾರು ಕಾರಣ? ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತಿನ ತುಂಬಾ ಇದೊಂದು ಉತ್ತರ ಇಲ್ಲದ ಪ್ರಶ್ನೆ ವೈರಲ್ ಆಗಿತ್ತು. ಅದಕ್ಕೆ ಎರಡನೇ ಭಾಗದಲ್ಲಿ ಉತ್ತರ ಸಿಗುತ್ತದೆ. ಉತ್ತರ ಏನೆಂದು ನಮಗೂ ಗೊತ್ತು. ಆದರೆ ಇಲ್ಲಿಯೇ ಅದನ್ನು ಹೇಳಿದರೆ ಸಿನಿಮಾ ನೋಡದವರು ಏನು ಮಾಡಬೇಕು? ಥೇಟರ್‍ಗೆ ಹೋಗಿ ಉತ್ತರ ಪಡೆದು ಸಮಾಧಾನ ಪಡಿ. ಆದರೆ ಒಂದು ಮಾತು. ಎಲ್ಲವೂ ಗೊತ್ತಾದ ಮೇಲೆ ಕೊಂಚ ನಿರಾಸೆ ಆಗೋದು ಖಂಡಿತ. ಯಾಕೆಂದರೆ ಇಷ್ಟೇನಾ ಕಾರಣ ಅನಿಸುವ ಆ ದೃಶ್ಯ. ರಾಜಮೌಳಿ ಅದೊಂದರಲ್ಲಿ ಸ್ವಲ್ಪ ಎಡವಿದ್ದಾರೆ.
ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ
ಕೀರವಾಣಿ ಸಂಗೀತಕ್ಕೆ ಉಸಿರೆತ್ತುವ ಹಾಗಿಲ್ಲ: ಹಾಗಂತ ಕತೆಯ ಓಟಕ್ಕೆ ಧಕ್ಕೆಯಾಗುವುದಿಲ್ಲ. ಯಾಕೆಂದರೆ ಆ ಉತ್ತರ ಸಿಗುವ ಹೊತ್ತಿಗೆ ನಿಮಗೆ ಮೊದಲ ಭಾಗದ ಆ ಪ್ರಶ್ನೆಯ ನೆನಪು ಒಂದಿಷ್ಟು ಮಾತ್ರ ಉಳಿದಿರುತ್ತದೆ. ಕಾರಣ ಅದಾಗಲೇ ಅಮರೇಂದ್ರ ಬಾಹುಬಲಿಯ ಆರ್ಭಟ, ಆ ಅಮೋಘ ಯುದ್ಧದ ಸನ್ನಿವೇಶಗಳು, ಸಮ್ಮೋಹನಗೊಳಿಸುವ ಲೋಕಗಳು ಇವೆಲ್ಲಾ ನಿಮ್ಮನ್ನು ಆವರಿಸಿಕೊಂಡಿರುತ್ತವೆ. ವಾಟ್ ನೆಕ್ಸ್ಟ್ ಎಂದು ಮನಸು ಕೇಳುತ್ತಿರುತ್ತದೆ. ಹೀಗಾಗಿ ಕಟ್ಟಪ್ಪ ಸೈಡಿಗೆ ಸರಿದಿರುತ್ತಾನೆ. ಇನ್ನು ಎಂಎಂ ಕೀರವಾಣಿ ಸಂಗೀತಕ್ಕೆ ನೂರಕ್ಕೆ ನೂರು ಅಂಕ ಕೊಟ್ಟು ಕೇಕೆ ಹಾಕಬಹುದು. ಕೆಲವು ದೃಶ್ಯಗಳನ್ನು ಆಕಾಶಕ್ಕೇರಿಸುತ್ತಾರೆ ಕೀರವಾಣಿ. ಸೆಂದಿಲ್ ಕುಮಾರ್ ಕ್ಯಾಮೆರಾ ಕೆಲಸದ ಬಗ್ಗೆ ಉಸಿರೆತ್ತುವ ಹಾಗಿಲ್ಲ.
ಆಕ್ಷನ್ ದೃಶ್ಯಗಳನ್ನು ಕಂಪೋಸ್ ಮಾಡಿದವರು ಅದೆಷ್ಟು ಹೈರಾಣಾಗಿದ್ದಾರೊ, ಸಾವಿರಾರು ಜನರನ್ನು ಸೇರಿಸಲು ಮೌಳಿ ಅದ್ಯಾವ ಪರಿ ಸುಸ್ತಾಗಿದ್ದಾರೊ, ಗ್ರಾಫಿಕ್ಸ್, ವಿಎಫ್‍ಎಕ್ಸ್, ಸ್ಪೆಶಲ್ ಎಫೆಕ್ಟ್, ಕಾಸ್ಟ್ಯೂಮ್ ಡಿಸೈನರ್, ಮೇಕಪ್ ಮೆನ್, ಎಡಿಟರ್, ಆರ್ಟ್ ಡೈರೆಕ್ಟರ್ ಒಬ್ಬೊಬ್ಬರೂ ಜೀವವನ್ನೇ ತೇದಿದ್ದಾರೆ. ರಾಜಮೌಳಿ ಕತೆಗೆ ಜೀವ ತುಂಬಿದ್ದಾರೆ. ಯಾರ್ಯಾರೊ ಯಾವ್ಯಾವುದೊ ಉದ್ದೇಶದಿಂದ ಸಿನಿಮಾ ಮಾಡುತ್ತಾರೆ. ಆದರೆ ರಾಜಮೌಳಿಯಂಥವರು ಸಿನಿಮಾಕ್ಕಾಗಿ ಸಿನಿಮಾ ಮಾಡುತ್ತಾರೆ. ಅದು ಅವರ ಉಸಿರಲ್ಲ, ರಕ್ತದಲ್ಲೇ ಬೆರೆತು ಬಿಟ್ಟಿದೆ. ಕನಸುಗಳಿಗೆ ಬಣ್ಣ ಬಳಿದು, ಕ್ಯಾಮೆರಾ ಹಿಂದಿಟ್ಟು ನಮ್ಮನ್ನೆಲ್ಲಾ ಮೂರು ಗಂಟೆ ಮೂಕರಾಗಿಸುತ್ತಾರಲ್ಲ. ಆ ಸಿನಿಮಾ ತಪಸ್ವಿಗೊಂದು ಸಲಾಂ ಹೇಳಿ. ಅದು ನಾವು ಅವರಿಗೆ ಕೊಡುವ ದೊಡ್ಡ ಗೌರವ.