ಚನ್ನಪಟ್ಟಣದಲ್ಲಿ ನಂಬಿಕೆ ದ್ರೋಹಿಗಳಿಗೆ ಜನ ಪಾಠ ಕಲಿಸ್ತಾರೆ: ಬಿಎಸ್‌ವೈ

Public TV
1 Min Read
yediyurappa

– ಎನ್‍ಡಿಎ ಅಭ್ಯರ್ಥಿ ನಿಖಿಲ್ ನೂರಕ್ಕೆ ನೂರು ಗೆಲ್ತಾರೆ

ಬೆಂಗಳೂರು: ನಿಖಿಲ್ ಕುಮಾರಸ್ವಾಮಿಯವರನ್ನು (Nikhil Kumaraswamy) ಚನ್ನಪಟ್ಟಣದ (Channapatna) ಎನ್‍ಡಿಎ ಅಭ್ಯರ್ಥಿ ಎಂದು ಘೋಷಿಸಿದ್ದೇವೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Nikhil Kumaraswamy NDA Candidate

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಇದೆ. ಮೋದಿಯವರ ಪಕ್ಷದಿಂದ ಬೆಂಬಲ ಇರುವ ಕಾರಣ ಅವರಿಗೆ ಗೆಲುವು ಖಚಿತ. ಕುಮಾರಸ್ವಾಮಿ, ಅಶೋಕ್ ಅವರು ಮತ್ತು ಎಲ್ಲಾ ಮುಖಂಡರು ಒಟ್ಟಾಗಿ ಸೇರಿದ್ದೇವೆ. ಇದು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯಲ್ಲ. ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಖಿಲ್ ಕುಮಾರಸ್ವಾಮಿಯವರು ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಎನ್‍ಡಿಎ ಪಕ್ಷಗಳಾದ ಬಿಜೆಪಿ- ಜೆಡಿಎಸ್ ಪಕ್ಷಗಳ ಎಲ್ಲಾ ಪ್ರಮುಖರು ಒಟ್ಟಾಗಿ ಅಲ್ಲಿ ಪ್ರವಾಸ ಮಾಡುತ್ತೇವೆ. ನಂಬಿಕೆ ದ್ರೋಹಿಗಳಿಗೆ ಜನ ಪಾಠ ಕಲಿಸ್ತಾರೆ. ನಾನು ಬೇರೆಯವರ ಬಗ್ಗೆ ಒಂದು ಶಬ್ದ ಮಾತನಾಡಲು ಇಷ್ಟ ಪಡುವುದಿಲ್ಲ. ಪಕ್ಷಾಂತರ ಮಾಡಿದವರ ಬಗ್ಗೆ ಮಾತನಾಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಈ ವೇಳೆ, ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಜೆಡಿಎಸ್ ಪಕ್ಷದ ನಾಯಕ ಸುರೇಶ್ ಬಾಬು, ಬಿಜೆಪಿ-ಜೆಡಿಎಸ್ ಪ್ರಮುಖರು ಇದ್ದರು.

Share This Article