ಚಿಕ್ಕಮಗಳೂರು: 7.50 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟಿಸಲಾಗಿದ್ದ ಆಯುಷ್ ಆಸ್ಪತ್ರೆ ಈಗ ಕಾರ್ ಶೆಡ್ ಆಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದ ಹಾಳು ಕೊಂಪೆಯಾಗಿದೆ.
ಚಿಕ್ಕಮಗಳೂರು ನಗರದಲ್ಲಿರುವ ಬೃಹತ್ ಜಿಲ್ಲಾ ಆಯುಷ್ ಆಸ್ಪತ್ರೆಯು ಅಧಿಕಾರಿಗಳು ಹಾಗೂ ಸ್ಥಳೀಯರ ಕಾರ್ ಶೆಡ್ ಆಗಿದೆ. 7.50 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ 50 ಹಾಸಿಗೆಯುಳ್ಳ ಈ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿದು ಒಂದೂವರೆ ವರ್ಷವಾಗಿದೆ.
ವರ್ಷದ ಹಿಂದಷ್ಟೇ ಇದು ಉದ್ಘಾಟನೆಯಾಗಿತ್ತು. ಆದರೆ, ಆಸ್ಪತ್ರೆ ಮಾತ್ರ ಓಪನ್ ಆಗಿಲ್ಲ. ಬೀಗ ಹಾಗೇ ಇದೆ. ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಶಂಕುಸ್ಥಾಪನೆ ಮಾಡಿದ್ದರು. ಹಾಲಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಆದರೆ, ಆಸ್ಪತ್ರೆ ತನ್ನ ಕೆಲಸ ಮಾತ್ರ ಮಾಡ್ತಿಲ್ಲ. ಕಟ್ಟಡದ ಸುತ್ತಮುತ್ತ ಕಸದ ರಾಶಿ ಆವರಿಸಿದ್ದು, ಬೀಗ ಬಿದ್ದ ಸೌಲಭ್ಯಯುತ ಆಸ್ಪತ್ರೆ ಈಗ ಅಧಿಕಾರಿಗಳಿಗೆ ಕಾರ್ ಶೆಡ್ ಆಗಿದೆ.
ಕಟ್ಟಡದ ಕ್ರೆಡಿಟ್ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ತೆಗೆದುಕೊಂಡಿದೆ. ಸಿ.ಟಿ.ರವಿ ಅವರು ಎಂಎಲ್‌ಎ ಆಗಿದ್ದಾಗ ಹೋರಾಡಿ ಮೆಡಿಕಲ್ ಕಾಲೇಜು, ಆಯುಷ್ ಆಸ್ಪತ್ರೆ ಎರಡನ್ನೂ ತಂದಿದ್ದರು. ಈಗಿನ ಶಾಸಕ ತಮ್ಮಯ್ಯನವರ ಪಾತ್ರವೂ ಅಷ್ಟೇ ಇದೆ. ಈಗ ಇಬ್ಬರೂ ಅಧಿಕಾರದಲ್ಲಿದ್ದಾರೆ. ಆದರೆ, ಆಸ್ಪತ್ರೆ ಮಾತ್ರ ಸೇವೆಗೆ ನಿಂತಿಲ್ಲ.
ಇದು 50 ಬೆಡ್ ಆಸ್ಪತ್ರೆಯಾಗಿದ್ದು, ಸುಮಾರು ಏಳೂವರೆ ಕೋಟಿ ವೆಚ್ಚದಲ್ಲಿ ರೆಡಿಯಾಗಿದೆ. ಆಯುಷ್ ಆಸ್ಪತ್ರೆಯಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ. ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಆಸ್ಪತ್ರೆಯನ್ನ ಸಾರ್ವಜನಿಕರ ಸೇವೆಗೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.