– 7 ತಿಂಗಳು ಯಾರ ಸಂಪರ್ಕದಲ್ಲೂ ಇರಲಿಲ್ಲ
– ಅಯೋಧ್ಯೆಗೆ ಬಂದು ರಾಮಲಲ್ಲಾರನ್ನು ನೋಡಲು ಮನವಿ
– ಪ್ರಾಣಪ್ರತಿಷ್ಠೆಗೂ ಮುನ್ನ ವೈರಲ್ ಫೋಟೋದ ಬಗ್ಗೆ ಶಿಲ್ಪಿ ಹೇಳಿದ್ದೇನು..?
ಅಯೋಧ್ಯೆ: ರಾಮಲಲ್ಲಾನ (Ram Lalla) ಮೂರ್ತಿ ಕೆತ್ತನೆ ಮಾಡಲು ಅಯೋಧ್ಯೆಗೆ ಬರುವುದಕ್ಕೂ ಮುನ್ನ ಮೈಸೂರಿನಲ್ಲಿ ನಡೆದ ಚಿಣ್ಣರ ಮೇಳದಲ್ಲಿ ಬಹಳಷ್ಟು ಸಮಯ ಕಳೆದಿದ್ದೇನೆ. ಈ ವಿಚಾರ ಯಾರಿಗೂ ಗೊತ್ತಿಲ್ಲ ಎಂದು ಶಿಲ್ಫಿ ಅರುಣ್ ಯೋಗಿರಾಜ್ (Arun Yogiraj) ಅವರು ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಅಯೋಧ್ಯೆಯಿಂದ (Ayodhya Ram Mandir) ವಾಪಸ್ ಆಗುವ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಜೊತೆ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ವೈರಲ್ ಆದ ಫೋಟೋದ ಬಗ್ಗೆಯೂ ಪ್ರತಿಕ್ರಿಯಿಸಿದರು.
Advertisement
Advertisement
ಈ ರಾಮನ ವಿಗ್ರಹ ಮಾಡಲು ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟಿದ್ದೀನಿ. 140 ಕೋಟಿ ಜನಕ್ಕೆ ದರ್ಶನ ಮಾಡಿಸಲು ಇರುವ ಅವಕಾಶ ಎರಡು ಕಣ್ಣು, ಒಂದು ಮೂಗು ಹಾಗೂ ಬಾಯಿ. ಅಷ್ಟರಲ್ಲಿ ನಾನು ಲಲ್ಲಾ ಅವರನ್ನು ಹುಡುಕಿ ದೇಶಕ್ಕೆ ತೋರಿಸಬೇಕಾಗಿರುತ್ತೆ. ಇದಕ್ಕೆ ಬಹಳಷ್ಟು ಅಧ್ಯಯನವನ್ನು ಮಾಡಿದ್ದೀನಿ. ಎಲ್ಲನೂ ಇಂದು ಫಲಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.
Advertisement
ಕೆತ್ತನೆಯಲ್ಲಿ ಬಳಸುವ ಉತ್ತಮ ಪಂಚತಾಳವನ್ನು ಇಲ್ಲಿ ಬಳಸಿದ್ದೇನೆ. ಒಂದು ಅಳತೆಯೊಳಗಡೆ ಕಲೆ ತೋರಿಸುವುದು ನಮ್ಮ ಕೈಯಲ್ಲಿರುತ್ತೆ. ಆ ಕಲೆಯನ್ನು ತೋರಿಸುವುದಕ್ಕೆ ಪ್ರಯತ್ನ ಪಟ್ಟಿದ್ದೇನೆ. ಇದಕ್ಕಿಂತಲೂ ದೇಶದ ಜನ ನೋಡಿ ಮೆಚ್ಚಿಕೊಂಡಿರುವುದು ನನಗೆ ಸಂತಸ ತಂದಿದೆ ಎಂದರು. ಇದನ್ನೂ ಓದಿ: ಬಾಲಕ ರಾಮನ ಕಣ್ತುಂಬಿಕೊಳ್ಳಲು 2ನೇ ದಿನವೂ ಸೇರಿದ ಲಕ್ಷಾಂತರ ಭಕ್ತರು- ದೇಗುಲದಲ್ಲಿ ಹೈ ಸೆಕ್ಯೂರಿಟಿ
Advertisement
ಅಯೋಧ್ಯೆಗೆ ಬಂದು ಲಲ್ಲಾನ ನೋಡಿ: ಮೂರ್ತಿ ಉದ್ಘಾಟನೆಯ ದಿನ ಬಹಳಷ್ಟು ಮಂದಿಯನ್ನು ನಾನು ಭೇಟಿಯಾಗಿದ್ದೇನೆ. ಆಗ ಅವರಲ್ಲಿ ಹೇಳಲಾರದ ಸಂತಸವನ್ನು ನಾನು ಕಂಡಿದ್ದೇನೆ. ವಿಗ್ರಹ ನೋಡಿದ ತಕ್ಷಣ ಎಲ್ಲರ ಕಣ್ಣಲ್ಲಿ ನೀರು ಬಂದಿದ್ದೂ ಉಂಟು. ಇದು ಲಲ್ಲಾನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವ ಫೋಟೋಗಿಂತಲೂ ರಾಮಲಲ್ಲಾ ಅವರನ್ನು ಎದುರುಗಡೆ ನೋಡಲು ತುಂಬಾ ಸುಂದರವಾಗಿದ್ದಾರೆ. ಹೀಗಾಗಿ ಅಯೋಧ್ಯೆಗೆ ಬಂದೇ ರಾಮಲಲ್ಲಾ ಅವರನ್ನು ನೋಡಿ ಎಂದು ಇದೇ ವೇಳೆ ಅವರು ಮನವಿ ಮಾಡಿಕೊಂಡರು. ಜೊತೆಗೆ ನಿಮ್ಮ ಲಲ್ಲಾ ತುಂಬಾ ಮುದ್ದಾಗಿದ್ದಾರೆ. ನಿಮಗೆಲ್ಲರಿಗೂ ಅವರು ಆಶೀರ್ವಾದ ಮಾಡಲಿ ಎಂದು ಶುಭಹಾರೈಸಿದರು.
ಎಲ್ಲರ ಸಂಪರ್ಕದಿಂದಲೂ ದೂರವಾಗಿದ್ದೆ : ಈ 6 ತಿಂಗಳು ನನ್ನ ಜೀವನದಲ್ಲಿಯೇ ಪ್ರಮುಖವಾದ ಘಟ್ಟವಾಗಿದೆ. ಇಡೀ ಪ್ರಪಂಚದಲ್ಲಿ ಯಾರಿಗೂ ಸಿಗದೇ ಇರುವ ಅವಕಾಶ ಇದಾಗಿದೆ. ಜೊತೆಗೆ ಇದೇ ವೇಳೆ ತಂದೆ-ತಾಯಿ, ಪತಿ ಸೇರಿದಂತೆ ಕುಟುಂಬಸ್ಥರಿಗೆ ಧನ್ಯವಾದಗಳನ್ನು ತಿಳಿಸಿದರು.
ನಾನು ಯಾರ ಜೊತೆನೂ ಸರಿಯಾಗಿ ಮಾತಾಡದೇ ಸುಮಾರು 7 ತಿಂಗಳು ಆಗಿತ್ತು. ಹೀಗಾಗಿ ಮಾತನಾಡಲು ಸ್ವಲ್ಪ ಕಷ್ಟ ಆಗುತ್ತಿದೆ. ಏಕಾಗ್ರತೆಗೆ ಎಲ್ಲಿಯೂ ತೊಂದರೆ ಆಗಬಾರದೆಂದು ಹೊರಜಗತ್ತಿನ ಜೊತೆ ಸಂಬಂಧ ಕಟ್ ಮಾಡಿಕೊಂಡಿದ್ದೆವು. ಯಾಕೆಂದರೆ ಇತಿಹಾಸ ಇರುವಂತಹ ಜಾಗ, ದೇಶಾದ್ಯಂತ ಜನ ಕಾಯುತ್ತಿದ್ದಾರೆ. ಇದರ ಪ್ರಾಮುಖ್ಯತೆ ನನಗೆ ಗೊತ್ತಿದ್ದರಿಂದ ಸಾಕಷ್ಟು ಅಧ್ಯಯನ ಮಾಡಿಕೊಂಡು ಮೂರ್ತಿ ಕೆತ್ತನೆ ಮಾಡಿದ್ದೇನೆ ಎಂದರು.
ಚಿಣ್ಣರ ಮೇಳದಲ್ಲಿ ಮಕ್ಕಳ ಜೊತೆ ಸಮಯ ಕಳೆದಿದ್ದೆ: ಅಯೋಧ್ಯೆಗೆ ಬರುವುದಕ್ಕಿಂತಲೂ ಮುಂಚೆ ಚಿಣ್ಣರ ಮೇಳಕ್ಕೆ ಹೋಗಿದ್ದೆ. ಅಲ್ಲಿ ಬಹಳಷ್ಟು ಸಮಯ ಕಳೆದಿದ್ದೇನೆ. ಮಕ್ಕಳ ಜೊತೆ ಇರುತ್ತಿದ್ದೆ. ಇದು ಯಾರಿಗೂ ಹೇಳಿಲ್ಲ. ಸಾಕಷ್ಟು ಫೋಟೋಗಳನ್ನು ಸೇವ್ ಮಾಡಿಕೊಂಡಿದ್ದೆ. ಒಟ್ಟಿನಲ್ಲಿ ಆ ಸಮಯದಲ್ಲಿ ಏನು ಮಾಡಬೇಕು ಎಂಬ ಆದೇಶ ಆ ಭಗವಂತನಿಂದಲೇ ಬಂದಿರುತ್ತದೆ ಎಂದು ಹೇಳಿದರು.
ಪ್ರಾಣಪ್ರತಿಷ್ಠಾನೆಗೂ ಮುನ್ನ ಫೋಟೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿದ ಅವರು, 7 ತಿಂಗಳಿಂದ ಕಾಪಾಡಿಕೊಂಡು ಬಂದೆ. ಆದರೆ ಅದು ಹೇಗೆ ಫೋಟೋ ಮೂಲಕ ಹೊರಗೆ ಬಂತು ಎನ್ನುವುದು ಗೊತ್ತಾಗಿಲ್ಲ. ಆದರೆ ಆ ಸಮಯದಲ್ಲಿ ಸಾಕಷ್ಟು ಬೇಸರ ಆಯಿತು. ಆದರೆ ಹಳೆಯ ಫೋಟೋ ಹಾಗೂ ಪ್ರತಿಷ್ಠಾಪನೆ ಆದ ಬಳಿಕ ರಾಮಲಲ್ಲಾನ ವಿಗ್ರಹಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಅದೇ ಖುಷಿ ಎಂದು ತಿಳಿಸಿದರು.
ಯೋಗಿ ಆದಿತ್ಯನಾಥ್ ಅವರು ಪ್ರಾಣಪ್ರತಿಷ್ಠೆ ದಿನ ತಮ್ಮ ಭಾಷಣದಲ್ಲಿ ನನಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಧಾನಿಯವರು ಮಾತನಾಡಲು ಸಿಕ್ಕಿಲ್ಲ. ಟ್ರಸ್ಟ್ ವತಿಯಿಂದ ಗೌರವಪೂರ್ವಕವಾಗಿ ಏನು ಕೊಟ್ಟರೂ ಖುಷಿನೇ ಎಂದು ಅರುಣ್ ಯೋಗಿರಾಜ್ ಅವರು ಪಬ್ಲಿಕ್ ಟಿವಿ ಜೊತೆ ಖುಷಿ ಹಂಚಿಕೊಂಡರು.