ನವದೆಹಲಿ: ಅಯೋಧ್ಯೆ ಪ್ರಕರಣವನ್ನು ದಿನ ನಿತ್ಯ ವಿಚಾರಣೆ ನಡೆಸುತ್ತಿರುವುದರಿಂದ ಜಮ್ಮು ಕಾಶ್ಮೀರದ ಕುರಿತ ಅರ್ಜಿ ವಿಚಾರಣೆಯನ್ನು ಮಂಗಳವಾರದಿಂದ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ.
ಅಯೋಧ್ಯೆ ಪ್ರಕರಣವನ್ನು ಪ್ರತಿ ನಿತ್ಯ ವಿಚಾರಣೆ ನಡೆಸುತ್ತಿರುವ ಕಾರಣ ನ್ಯಾಯಪೀಠಕ್ಕೆ ಸಮಯವಿಲ್ಲ. ಹೀಗಾಗಿ ಜಮ್ಮು ಕಾಶ್ಮೀರದ ಕುರಿತ ಅರ್ಜಿಗಳನ್ನು ಸಾಂವಿಧಾನಿಕ ಪೀಠವು ನಾಳೆಯಿಂದ ವಿಚಾರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಾಗೂ ಕಾಶ್ಮೀರದ ಸ್ಥತಿಗತಿ ಕುರಿತು ಸುಪ್ರೀಂ ನಾಳೆಯಿಂದ ವಿಚಾರಣೆ ಆರಂಭಿಸಲಿದೆ.
Advertisement
Advertisement
370ನೇ ವಿಧಿ ಅನ್ವಯ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದ ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಹೇರಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಒಂದು ದಿನದ ಮಟ್ಟಿಗೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಸಂವಿಧಾನಿಕ ಪೀಠವೇ ಈ ಪ್ರಕರಣವನ್ನು ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಈ ವೇಳೆ ತಿಳಿಸಿದೆ.
Advertisement
ಅನೇಕ ಪ್ರಕರಣಗಳನ್ನು ವಿಚಾರಣೆ ನಡೆಸಲು ನಮಗೆ ಸಮಯವಿಲ್ಲ. ನಮ್ಮಲ್ಲಿ ಸಾಂವಿಧಾನಿಕ ಪೀಠ ಪ್ರಕರಣ(ಅಯೋಧ್ಯೆ ವಿವಾದ) ವಿಚಾರಣೆ ನಡೆಯುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Advertisement
ನ್ಯಾ.ಎನ್.ವಿ.ರಮಣ ನೇತೃತ್ವದ ಪಂಚ ನ್ಯಾಯಾಧೀಶರ ಪೀಠವು ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ನಾಳೆ ವಿಚಾರಣೆ ನಡೆಸಲಿದೆ. ಸಾಂವಿಧಾನಿಕ ಪೀಠವು ಕಾಶ್ಮೀರದಲ್ಲಿ ಪತ್ರಕರ್ತರ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧಗಳು ಹಾಗೂ ಅಪ್ರಾಪ್ತರನ್ನು ಅಕ್ರಮವಾಗಿ ಬಂಧಿಸಿರುವುದರ ಕುರಿತ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ತಿಳಿದು ಬಂದಿದೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯ ಬಂಧನವನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್‍ಎ) ಅಡಿ ಪ್ರಶ್ನಿಸಬೇಕು. ಫಾರೂಕ್ ಅಬ್ದುಲ್ಲಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂಬ ರಾಜ್ಯಸಭಾ ಸದಸ್ಯ ವೈಕೋ ಅವರ ಅರ್ಜಿಯನ್ನು ಮುಂದುವರಿಸಲು ಸುಪ್ರೀಂ ನಿರಾಕರಿಸಿದೆ.
ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಹೇರಿದ ಸಂದರ್ಭದಲ್ಲಿ ಆಗಸ್ಟ್ 5ರಿಂದ ಯಾವುದೇ ನಿರ್ಧಿಷ್ಟ ಆರೋಪಗಳಿಲ್ಲದೆ ಪಿಎಸ್‍ಎ ಕಾಯ್ದೆಯಡಿ ಸೆಪ್ಟೆಂಬರ್ 17ರಂದು ಫಾರೂಕ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿತ್ತು. ಈ ಕಾಯ್ದೆಯನ್ವಯ ವಿಚಾರಣೆ ಇಲ್ಲದೆ ಎರಡು ವರ್ಷಗಳ ವರೆಗೆ ಬಂಧನದಲ್ಲಿಡಲು ಅವಕಾಶವಿದೆ.
ಕಾಶ್ಮೀರ ಪ್ರಕರಣಗಳ ವಿಚಾರಣೆ ನಡೆಸಬೇಕಿದ್ದ ಮುಖ್ಯನ್ಯಾಯಮೂರ್ತಿ ಹಾಗೂ ಇತರ ಇಬ್ಬರು ನ್ಯಾಯಾಧೀಶರು ಅಯೋಧ್ಯೆ ಪ್ರಕರಣದ ನ್ಯಾಯಪೀಠದಲ್ಲಿದ್ದಾರೆ. ದೇವಾಲಯ-ಮಸೀದಿ ವಿವಾದದ ವಿಚಾರಣೆಯನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 18ರ ಗಡುವು ವಿಧಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ನವೆಂಬರ್ 17ರಂದು ನಿವೃತ್ತಿಯಾಗುತ್ತಿದ್ದು, ಅಷ್ಟರಲ್ಲಿ ತೀರ್ಪು ಪ್ರಕಟಿಸಬೇಕಿದೆ. ಇಲ್ಲವಾದಲ್ಲಿ ಇಡೀ ಪ್ರಕ್ರಿಯೆ ಮತ್ತೆ ಪ್ರಾರಂಭವಾಗುತ್ತದೆ. ಹೀಗಾಗಿ ಜಮ್ಮು ಕಾಶ್ಮೀರ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.