ಹುಬ್ಬಳ್ಳಿ: ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ ರಾತ್ರಿ ಹತ್ತು ಗಂಟೆಯಾದರೂ ಆರಂಭವಾಗದೇ ಎಸ್‌ಎಸ್‌ಸಿ ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟಾಗಿದೆ.
ಹುಬ್ಬಳ್ಳಿ ಕೇಶ್ವಾಪುರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ ಆಗರವೇ ಕಂಡುಬಂದಿದೆ. ಈ ಮೂಲಕ ಭವಿಷ್ಯದ ಕೇಂದ್ರ ಸರ್ಕಾರಿ ನೌಕರರ ಜೊತೆಗೆ ಪರೀಕ್ಷಾ ಕೇಂದ್ರ ಸಿಬ್ಬಂದಿ ಹುಡುಗಾಟವಾಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು ಪರೀಕ್ಷೆಗಾಗಿ ಆಗಮಿಸಿದ್ದರು. ಆದರೆ ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ ರಾತ್ರಿ ಹತ್ತು ಗಂಟೆಯಾದರೂ ಆರಂಭವಾಗಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಆನ್‌ಲೈನ್ ಪರೀಕ್ಷೆಗೆ ಯಾವುದೇ ವ್ಯವಸ್ಥೆ ಇಲ್ಲ. ಜೊತೆಗೆ ವಿದ್ಯುತ್ ಮತ್ತು ಸರ್ವರ್‌ಗೆ ಸರಿಯಾದ ವ್ಯವಸ್ಥೆಯಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡದೇ ನೂರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ.
ಇನ್ನೂ ಅಭ್ಯರ್ಥಿಗಳ ಸಮಸ್ಯೆಗಳನ್ನು ಕೇಳಲು ಯಾವುದೇ ಅಧಿಕಾರಿಗಳು ಸಹ ಇಲ್ಲ. ಇದರಿಂದ ರೊಚ್ಚಿಗೆದ್ದು ಪರೀಕ್ಷಾ ಕೇಂದ್ರದ ಎದುರೇ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.