ಚಿತ್ರದುರ್ಗ: ಆಟೋ ಚಾಲಕರಿಬ್ಬರು ಆಟೋ ಅಡ್ಡ ನಿಲ್ಲಿಸಿ ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಐಯುಡಿಪಿ ಬಡಾವಣೆಯ 10ನೇ ಅಡ್ಡರಸ್ತೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಇಳಿಯುತ್ತಿದ್ದ ವೇಳೆ ರಸ್ತೆ ಬದಿ ಬಸ್ ನಿಲ್ಲಿಸಿದರೆಂದು ಆಕ್ರೋಶಗೊಂಡ ರಾಜು ಹಾಗು ರವಿ ಎಂಬ ಆಟೋ ಚಾಲಕರು ಆಟೋವನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ ಗೆ ಅಡ್ಡಲಾಗಿ ನಿಲ್ಲಿಸಿದ್ದಾರೆ. ಮಾತ್ರವಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಏಕಾಏಕಿ ನಗರ ಸಾರಿಗೆ ಬಸ್ ಚಾಲಕ ಲಕ್ಷ್ಮಣ್ ಮೇಲೆ ಹಲ್ಲೆ ನಡೆಸಿದ್ದಾರೆ.
ಪರಸ್ಪರ ಮಾತು ಬೆಳೆದು ರಸ್ತೆ ಮಧ್ಯದಲ್ಲಿಯೇ ಒಬ್ಬರ ಕುತ್ತಿಗೆ ಒಬ್ಬರು ಹಿಡಿದು ಕುಸ್ತಿಯಾಡಿದ್ದಾರೆ. ಆಗ ಖಾಕಿಗಳ ಜಗಳ ಬಿಡಿಸಲು ಘಟನಾ ಸ್ಥಳದಲ್ಲಿದ್ದ ಹಿರಿಯ ನಾಗರಿಕರು ಮುಂದಾದರು ಕೂಡ ಪ್ರಯೋಜನವಾಗಲಿಲ್ಲ. ಹೀಗಾಗಿ ಉಳಿದ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.
ಕಳೆದ ಒಂದು ವರ್ಷದ ಹಿಂದೆಯಷ್ಟೇ ನಗರ ಸಾರಿಗೆ ಚಿತ್ರದುರ್ಗದಲ್ಲಿ ಸಂಚಾರ ಆರಂಭಿಸಿರುವುದು ಆಟೋ ಚಾಲಕರಿಗೆ ಇದು ನುಂಗಲಾರದ ತುತ್ತಾಗಿದೆ. ಹೀಗಾಗಿ ಚಿತ್ರದುರ್ಗದ ಹೊರ ವಲಯದಲ್ಲಿರೋ ಐಯುಡಿಪಿ ಬಡಾವಣೆಯಲ್ಲಿ ಇಂತಹ ಘಟನೆ ಪದೇ ಪದೇ ಮರುಕಳಿಸುತ್ತಿದೆ ಅಂತ ನಗರ ಸಾರಿಗೆ ಚಾಲಕ ಲಕ್ಷ್ಮಣ್ ಆರೋಪಿಸಿದ್ದಾರೆ. ಮದ್ಯಪಾನ ಮಾಡಿಕೊಂಡು ಬಂದು ಹಲ್ಲೆ ನಡೆಸಿರೋ ಆಟೋ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ನಮಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.