ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದು ಬುದ್ಧಿ ಹೇಳಿದ್ದ ಪತಿಯನ್ನೇ ದುಷ್ಕರ್ಮಿಗಳು ಕತ್ತು ಸೀಳಿ ಕೊಲೆಗೈದ ಭಯಾನಕ ಘಟನೆ ನಗರದ ಡಿ.ಜೆ ಹಳ್ಳಿ ಶಾಂಪುರದ ರೈಲ್ವೆ ಗೇಟ್ ಬಳಿ ನಡೆದಿದೆ.
ವಿನೋದ್ ಅಲಿಯಾಸ್ ಗುಂಡ(32) ಕೊಲೆಯಾದ ದುರ್ದೈವಿ. ವಿನೋದ್ ಅವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಇಂದು ಡಿ.ಜೆ ಹಳ್ಳಿ ಶಾಂಪುರದ ರೈಲ್ವೆ ಗೇಟ್ ಸಮೀಪ ಅವರ ಕತ್ತು ಸೀಳಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಆಟೋದಲ್ಲಿ ಚಾಲಕ ಕುಳಿತಿದ್ದ ವೇಳೆಯೇ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ, ಕತ್ತು ಸೀಳಿ ಪರಾರಿಯಾಗಿದ್ದಾರೆ. ಈ ಕೊಲೆಯ ಹಿಂದೆ ವಿನೋದ್ ಪತ್ನಿ ಅನಿತಾಳ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಅನಿತಾ ಹಾಗೂ ವಿನೋದ್ ಅವರಿಗೆ 12 ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಮೂರು ಮಕ್ಕಳು ಕೂಡ ಇದ್ದಾರೆ. ವಿನೋದ್ ತಂದೆ, ತಾಯಿ ಜೊತೆ ಸೊಸೆ ಅನಿತಾ ಜಗಳವಾಡಿದ್ದಳು ಹೀಗಾಗಿ ಅನಿತಾ ತಾಯಿ ಅಳಿಯ ಮಗಳನ್ನು ಹೊಸಕೋಟೆ ಬಳಿಯ ಅವಲಹಳ್ಳಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಯೇ ಇಬ್ಬರು ಸಂಸಾರ ನಡೆಸುತ್ತಿದ್ದರು. ಅವಲಹಳ್ಳಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಅನಿತಾಗೆ ನಾರಾಯಣ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯ ಇಬ್ಬರ ನಡುವೆ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ಬಗ್ಗೆ ವಿನೋದ್ ಅವರಿಗೆ ತಿಳಿದಾಗ ಪತ್ನಿಗೆ ಬುದ್ಧಿ ಹೇಳಿ ವಾಪಸ್ ಶಾಂಪುರಕ್ಕೆ ಕರೆದುಕೊಂಡು ಬಂದಿದ್ದರು.
ಪತಿ ಬುದ್ಧಿವಾದ ಹೇಳಿದ್ದರೂ ಅನಿತಾ ಮಾತ್ರ ಪ್ರಿಯಕರ ನಾರಾಯಾಣ್ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ದಳು. ತಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿ ಮಾಡುತ್ತಾನೆ ಎಂದು ತಿಳಿದು ಪತಿಯ ಕೊಲೆಗೆ ಪ್ಲಾನ್ ಮಾಡಿದ್ದಳು ಎನ್ನಲಾಗಿದ್ದು, ಪೊಲೀಸರು ಅನಿತಾ, ನಾರಾಯಣ್ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ದೇವರ ಜೀವನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.