ಚಿಕ್ಕಬಳ್ಳಾಪುರ: ಜನನಿಬಿಡ ಪ್ರದೇಶದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ನಗರದ ಆಜಾದ್ ಚೌಕ್ ನಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿ ಅಗ್ರಹಾರ ನಿವಾಸಿ ಮುಸ್ತಾಕ್(35). ಚಾಕು ಇರಿತಕ್ಕೊಳಗಾಗಿ ಅನಾಥವಾಗಿ ಬಿದ್ದಿದ್ದ ಮುಸ್ತಾಕ್ ಅವರನ್ನು ಪೊಲೀಸರು ಹಾಗೂ ಸ್ಥಳೀಯರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅಷ್ಟರಲ್ಲೇ ಮುಸ್ತಾಕ್ ಮೃತಪಟ್ಟಿದ್ದಾರೆ. ಘಟನೆ ಸ್ಥಳದಲ್ಲಿ ಏಕಾಂಗಿಯಾಗಿ ಬಿದ್ದಿದ್ದ ಮುಸ್ತಾಕ್‍ನನ್ನ ಕೊಲೆ ಮಾಡಿದವರು ಯಾರು ಮತ್ತು ಏಕೆ ಮಾಡಿದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಎರಡೂವರೆ ತಿಂಗಳಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ- ಆರೋಪಿ ಬಂಧನ
ನವೀದ್ ಎಂಬುವರ ಮೇಲೆ ಅನುಮಾನ!
ಘಟನೆ ನಂತರ ಕೆಲ ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಆಟೋ ಚಾಲಕ ನವೀದ್ ಹಾಗೂ ಮೃತ ಮುಸ್ತಾಕ್ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆಸಿ ಜಗಳ ಆಡುತ್ತಿದ್ದರು. ಈ ವೇಳೆ ನವೀದ್ ಮುಸ್ತಾಕ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಹೋಟೆಲ್‍ನಲ್ಲಿ ಅಗ್ನಿ ಅವಘಡ – 7 ಜನ ಪಾರು, ತಪ್ಪಿತು ಭಾರೀ ಅನಾಹುತ
ಈ ನಿಟ್ಟಿನಲ್ಲಿ ಪರಾರಿಯಾದ ನವೀದ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸರು ಅಜಾದ್ ಚೌಕ್ ನಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದರು. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು, ಮೂರ್ನಾಲ್ಕು ಸುಳಿವು ಸಿಕ್ಕಿದೆ ಎಂದಿದ್ದಾರೆ. ಆ ಸುಳಿವನ್ನು ಉಪಯೋಗಿಸಿಕೊಂಡು ತನಿಖೆ ನಡೆಸಿ ಕೊಲೆಗಾರರ ಪತ್ತೆ ಮಾಡುವುದಾಗಿ ತಿಳಿಸಿದ್ದಾರೆ.