ಕ್ರೈಸ್ಟ್ ಚರ್ಚ್ : ಪ್ರಬಲ ಅಫ್ಘಾನಿಸ್ತಾನದ ಸವಾಲನ್ನು ದಿಟ್ಟವಾಗಿ ಮೆಟ್ಟಿನಿಂತ ಆಸ್ಟ್ರೇಲಿಯಾ ತಂಡ ಅಂಡರ್-19 ವಿಶ್ವಕಪ್ ಟೂರ್ನಿಯ ಫೈನಲ್‍ಗೆ ಲಗ್ಗೆ ಇಟ್ಟಿದೆ. ಹೇಗ್ಲಿ ಓವಲ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿರಾಯಾಸವಾಗಿ ಅಫ್ಘನ್ನರನ್ನು ಮಣಿಸಿ ಪ್ರಶಸ್ತಿ ಪಂದ್ಯಕ್ಕೆ ಮುನ್ನಡೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್‍ಗೆ ಇಳಿದ ನವೀಮ್ ಉಲ್ ಹಖ್ ನೇತ್ರತ್ವದ ಅಫ್ಘಾನಿಸ್ತಾನ ಆಸೀಸ್ ಬಿಗು ಬೌಲಿಂಗ್ ದಾಳಿ ಎದುರು ಪೆವಿಲಿಯನ್ ಪರೇಡ್ ನಡೆಸಿತು. 7 ಮಂದಿ ಬ್ಯಾಟ್ಸ್‍ಮನ್ ಗಳು ಎರಡಂಕಿಯ ಮೊತ್ತವನ್ನೂ ದಾಟಲಾಗದೆ ಪೆವಿಲಿಯನ್ ಸೇರಿದರು.
Advertisement
Advertisement
ನಾಯಕ ನವೀಮ್ ಕೊಡುಗೆ ಕೇವಲ 8 ರನ್. ಆದರೆ ಒಂದು ಕಡೆ ಬ್ಯಾಟ್ಸ್‍ಮನ್ ಗಳು ಕ್ರೀಸ್ ಗೆ ಬಂದಷ್ಟೇ ವೇಗದಲ್ಲಿ ಮರಳುತ್ತಿದ್ದರೂ ಮತ್ತೊಂದು ಕಡೆಯಲ್ಲಿ ಬಂಡೆಯಂತೆ ನಿಂತ ವಿಕೆಟ್ ಕೀಪರ್ ಇಕ್ರಾಮ್ ಅಲಿ ಆಸ್ಟ್ರೇಲಿಯಾ ಬೌಲರ್‍ಗಳ ಬೆವರಿಳಿಸಿದರು. 119 ಎಸೆತಗಳನ್ನು ಎದುರಿಸಿದ ಅಲಿ, 8 ಬೌಂಡರಿಗಳ ನೆರವಿನೊಂದಿಗೆ 80 ರನ್ ಗಳಿಸಿ ಅಫ್ಘಾನಿಸ್ತಾನದ ಮಾನ ಕಾಪಾಡಿದರು.
Advertisement
ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಅಲಿ, ಧೃತಿಗೆಡದೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಿಸಿದರು. ಅಲಿ ವಿಕೆಟ್ ಪತನವಾಗುತ್ತಲೇ ಆಸೀಸ್ ಹಾದಿ ಸುಗಮವಾಯಿತು. ಅಂತಿಮವಾಗಿ 48 ಓವರ್‍ಗಳಲ್ಲಿ ಅಫ್ಘಾನಿಸ್ತಾನ 181 ರನ್‍ಗಳಿಗೆ ಆಲೌಟ್ ಆಯಿತು.
Advertisement
ಆಸ್ಟ್ರೇಲಿಯಾ ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಜೊನಾಥನ್ ಮರ್ಲೋ 10 ಓವರ್‍ಗಳಲ್ಲಿ ಕೇವಲ 24ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಇದರಲ್ಲಿ 2 ಓವರ್ ಮೇಡನ್ ಆಗಿತ್ತು. ಉಳಿದಂತೆ ಕಾಕ್ ಇವಾನ್ಸ್ 2 ಹಾಗೂ ನಾಲ್ಬರು ಬೌಲರ್‍ಗಳು ತಲಾ 1 ವಿಕೆಟ್ ಪಡೆದರು.
ಸುಲಭ ಗುರಿಯನ್ನು ಬೆನ್ನಟ್ಟುವ ವೇಳೆ ಆಸ್ಟ್ರೇಲಿಯಾ ಯಾವುದೇ ಹಂತದಲ್ಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಜಾಕ್ ಎಡ್ವರ್ಡ್ 65 ಎಸೆತಗಳ ಮುಂದೆ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಗಳ ನೆರವಿನೊಂದಿಗೆ 72 ರನ್ ಗಳಿಸಿ ಖೈಸ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರು. ನಾಯಕ ಜೇಸನ್ ಸಂಘ 26 ರನ್‍ಗಳಿಗೆ ವಾಪಸ್ಸಾದರು. ಬೌಲಿಂಗ್ ನಲ್ಲಿ ಮಿಂಚಿದ್ದ ಮೆರ್ಲೋ 17 ರನ್ ಗಳಿಸಿದರು. ಆದರೆ 5ನೇ ವಿಕೆಟ್ ಗೆ ಜೊತೆಯಾದ ಪರಂ ಉಪ್ಪಳ ಹಾಗೂ ಮೆಕ್’ಸ್ವೀನಿ ತಂಡಕ್ಕೆ ಹೆಚ್ಚಿನ ಹಾನಿಯಾಗದಂತೆ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿ 53 ರನ್‍ಗಳ ಜೊತೆಯಾಟದ ಮೂಲಕ ತಂಡವನ್ನು ಜಯದ ಗಡಿ ದಾಟಿಸಿದರು.
ಉಪ್ಪಳ್ 32 ರನ್ ಗಳಿಸಿದರೆ, ಮೆಕ್’ಸ್ವೀನಿ 22 ರನ್‍ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 37.3 ಓವರ್‍ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗೆಲುವಿನ ಗುರಿ ತಲುಪಿದ ಆಸ್ಟ್ರೇಲಿಯಾ, ಶನಿವಾರದಂದು ನಡೆಯುವ ಫೈನಲ್’ಗೆ ಟಿಕೆಟ್ ಪಡೆಯಿತು. ನಾಳೆ ನಡೆಯಲಿರುವ ಮತ್ತೊಂದು ಸೆಮಿಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.
Australia have just confirmed their tickets to Tauranga for the #U19CWC Final with a six-wicket win over Afghanistan!
Will their opponent be ???????? or ?????????
Scores & Stats ➡️ https://t.co/jqTHMnPrv3 pic.twitter.com/Gj8uLWPy4W
— ICC (@ICC) January 29, 2018