ಬೆಂಗಳೂರು: ನಿರ್ದೇಶಕ ರಿಷಬ್ ಶೆಟ್ಟಿ ನಿಜಕ್ಕೂ ಜಾದೂ ಮಾಡಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಡೀ ಕರ್ನಾಟಕದ ಎಲ್ಲ ಭಾಗಗಳ ಜನರೂ ಈ ಚಿತ್ರವನ್ನು ಪ್ರೀತಿಯಿಂದ ವೀಕ್ಷಿಸುತ್ತಿದ್ದಾರೆ, ಮೆಚ್ಚಿಕೊಳ್ಳುತ್ತಿದ್ದಾರೆ. ಬಾಯಿಮಾತಲ್ಲೇ ಹರಡಿಕೊಂಡಿದ್ದ ಒಳ್ಳೆ ಮಾತುಗಳೆಲ್ಲವೂ ಈ ಚಿತ್ರದ ಗೆಲುವಾಗಿ ಮಾರ್ಪಾಡಾಗಿದೆ.
ಒಂದು ಕಥೆಯನ್ನು ಒಂದು ಚೌಕಟ್ಟಿಗೆ ಸಿಗದಂತೆ ಮತ್ತು ಕಥೆಯ ಬಿಂದು ಚದುರದಂತೆ ಕಟ್ಟಿ ಕೊಡುವುದು ತ್ರಾಸದಾಯಕ ಕೆಲಸ. ಆದರೆ ಇದರಲ್ಲಿ ರಿಷಬ್ ಶೆಟ್ಟಿ ಸಂಪೂರ್ಣವಾಗಿ ಗೆದ್ದಿದ್ದಾರೆ. ಆರಂಭದಲ್ಲಿ ಈ ಚಿತ್ರ ಕಲಾತ್ಮಕ ಎಂಬ ಸುದ್ದಿ ಹರಡಿತ್ತು. ಆ ನಂತರದಲ್ಲಿ ಮಕ್ಕಳ ಚಿತ್ರ ಎಂಬ ಸುದ್ದಿಯೂ ಅಲ್ಲಲ್ಲಿ ಹಬ್ಬಿಕೊಂಡಿತ್ತು. ಆದರೆ ರಿಷಬ್ ಮಾತ್ರ ಈ ಚಿತ್ರ ಅದ್ಯಾವುದೂ ಅಲ್ಲ, ಇದು ಪಕ್ಕಾ ಜ್ಯೂನಿಯರ್ ಕಿರಿಕ್ ಪಾರ್ಟಿ ಅಂತ ಸ್ಪಷ್ಟವಾಗಿಯೇ ಹೇಳಿದ್ದರು.
ಚಿತ್ರ ನೋಡಿದ ಎಲ್ಲರಿಗೂ ಜ್ಯೂನಿಯರ್ ಕಿರಿಕ್ ಪಾರ್ಟಿಗಳ ಕೀಟಲೆ, ಅದರ ಜೊತೆಗೆ ತೆರೆದುಕೊಳ್ಳೋ ಮನ ಮಿಡಿಯುವ ಕಥೆಗಳೆಲ್ಲವೂ ಇಷ್ಟವಾಗಿವೆ. ಇದು ಕಾಸರಗೋಡು ಸೀಮೆಯಲ್ಲಿ ನಡೆಯೋ ಕಥೆಯಾದರೂ ಗುರುತು ಪರಿಚಯವಿಲ್ಲದ ಪ್ರದೇಶಗಳ ಮನಸುಗಳನ್ನೂ ಸೂರೆಗೊಂಡಿದೆ.
ಮಕ್ಕಳ ಚಿತ್ರದ ಚೌಕಟ್ಟಿಗೂ ಸಿಗದೆ, ಗಡಿನಾಡಿನ ಸಮಸ್ಯೆಗಳ ಪರಿಧಿಯಲ್ಲಿಯೂ ನಿಲ್ಲದೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿರೋ ಈ ಚಿತ್ರ ಪಕ್ಕಾ ಎಂಟರ್ ಟೈನರ್ ಎಂಬುದರಲ್ಲಿ ಎರಡು ಮಾತಿಲ್ಲ. ನೀವು ಈವರೆಗೂ ಈ ಚಿತ್ರವನ್ನು ನೋಡಿಲ್ಲವಾದರೆ ಈ ವೀಕೆಂಡ್ ಅದಕ್ಕಾಗಿ ಮೀಸಲಾಗಲಿ. ಒಂದು ವೇಳೆ ಈ ಚಿತ್ರವನ್ನು ಮಿಸ್ ಮಾಡಿಕೊಂಡರೆ ಒಂದೊಳ್ಳೆ ಚಿತ್ರ ನೋಡೋ ಅವಕಾಶವನ್ನೂ ಕಳೆದುಕೊಂಡಂತಾಗುತ್ತೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv