ಉಡುಪಿ: ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಅಧಿಕಾರಿಗಳ ಮೇಲೆ ಜಿಲ್ಲೆಯ ಕುಂದಾಪುರದಲ್ಲಿ ಹಲ್ಲೆಯತ್ನ ನಡೆದಿದೆ. ಕುಂದಾಪುರದ ಸಹನಾ ರೆಸ್ಟೋರೆಂಟ್ ಮೇಲೆ ದಾಳಿ ಮಾಡಲು ತೆರಳಿದ್ದ ಕುಂದಾಪುರ ಸಹಾಯಕ ಕಮಿಷನರ್ ಮತ್ತು ಐಎಎಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ.
ಸಹನಾ ಹೋಟೆಲ್ ಮತ್ತು ಲಾಡ್ಜ್ ನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಕುಂದಾಪುರ ಸಹಾಯಕ ಕಮಿಷನರ್ ಭೂಬಾಲನ್ ಮತ್ತು ಐಎಎಸ್ ಅಧಿಕಾರಿ ಪೂವಿತಾ ಅವರಿಗೆ ಸಾರ್ವಜನಿಕರು ದೂರು ನೀಡಿದ್ದರು.
Advertisement
Advertisement
ಚುನಾವಣಾ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಸೋಮವಾರ ರಾತ್ರಿ ಕುಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಕೋಟೇಶ್ವರದ ಸಹನಾ ಹೋಟೆಲ್ ಆಂಡ್ ಲಾಡ್ಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಸಹನಾ ಹೋಟೆಲಿನಲ್ಲಿ ಹೊರಗಿನವರಿಗೆ ಮದ್ಯ ಸರಬರಾಜಿಗೆ ಅವಕಾಶ ಇಲ್ಲದೆ ಹೋದರೂ ಅನಧಿಕೃತವಾಗಿ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಹೋಟೆಲಿನವರೊಂದಿಗೆ ಪ್ರಶ್ನೆ ಮಾಡಿದ್ದಾರೆ.
Advertisement
ಈ ವೇಳೆ ಹೋಟೆಲಿನವರು ಮತ್ತು ಅಲ್ಲಿದ್ದ ಕೆಲವರೊಂದಿಗೆ ಮಾತಿನ ಚಕಮಕಿ ನಡೆದಿದೆ. ಅಪಾಯದ ಮುನ್ಸೂಚನೆಯನ್ನು ಅರಿತ ಅಧಿಕಾರಿಗಳು ಕೂಡಲೇ ಕುಂದಾಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಇನ್ನಿಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದು ಶೋಧ ಕಾರ್ಯ ನಡೆದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಮಾಹಿತಿ ನೀಡಿದ್ದಾರೆ. ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಸಲುವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಹಾಯಕ ಕಮೀಷನರ್ ಅವರಿಗೆ ಗನ್ ಮ್ಯಾನ್ ನೀಡಿದ್ದು, ಇದರಿಂದ ನಡೆಯಬಹುದಾದ ಹಲ್ಲೆ ತಪ್ಪಿದೆ.
ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಹೋಟೆಲಿನವರ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.