ವಿಜಯಪುರ: ಮರಳುಗಾರಿಕೆ ಸಂಬಂಧ ತಪ್ಪಾಗಿ ತಿಳಿದು ಬೇರೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಇಂಡಿಯ ಮಾಜಿ ಶಾಸಕ ರವಿಕಾಂತ ಪಾಟೀಲ ಮತ್ತು ಆತನ ಮೂರು ಸಹಚರರನ್ನು ಪೊಲೀಸರು ಬಂಧಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಇಂಡಿ ತಾಲೂಕಿನ ರೇವತಗಾಂವ ಗ್ರಾಮದ ಕಾಮೇಶ ಪಾಟೀಲ್ ಮತ್ತು ಸ್ನೇಹಿತರಾದ ಮಳಸಿದ್ದಯ್ಯಾ ಹಿರೇಮಠ ಹಾಗೂ ಶಿವಾನಂದ ವಡ್ಡರ ಮೇಲೆ ಮಾರಣಾಂತಿಕವಾಗಿ ಗುರುವಾರ ತಡರಾತ್ರಿ ಝಳಕಿ-ಧೂಳಖೇಡ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿಕಾಂತ ಪಾಟೀಲ ಮತ್ತು ಸಹಚರರು ಹಲ್ಲೆ ಮಾಡಿದ್ದಾರೆ.
ಅಲ್ಲದೆ ಹಲ್ಲೆ ಬಳಿಕ ಕಾಮೇಶ ಹಾಗೂ ಆತನ ಗೆಳೆಯರ ದುಡ್ಡು ಮತ್ತು ಬಂಗಾರ ಕಿತ್ತುಕೊಂಡು ಹೋಗಿದ್ದಾರೆಂದು ಕಾಮೇಶ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ ಸೇರಿದಂತೆ ಮೂವರನ್ನು ಝಳಕಿ ಪೊಲೀಸರು ಬಂಧಿಸಿ ವಿಜಯಪುರದ ದರ್ಗಾ ಕೇಂದ್ರ ಕಾರಾಗೃಹಕ್ಕೆ ಕಳಿಸಿದ್ದಾರೆ.
ಮರಳುಗಾರಿಕೆ ಸಂಬಂಧ ರವಿಕಾಂತ ಪಾಟೀಲ್ ಮತ್ತು ಮಹಾರಾಷ್ಟ್ರದ ಪಿಂಟೂಗೌಡ ಎಂಬವರ ಮಧ್ಯೆ ವೈಷಮ್ಯವಿತ್ತು. ಈ ಹಿನ್ನೆಲೆಯಲ್ಲಿ ಸ್ಕಾರ್ಪಿಯೊದಲ್ಲಿ ತೆರಳುತ್ತಿದ್ದ ಕಾಮೇಶ ಪಾಟೀಲ್ ಅವರನ್ನು ಪಿಂಟೂಗೌಡ ಎಂದು ತಿಳಿದು ಕಾಮೇಶಗೌಡಾ ಸ್ನೇಹಿತರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಜಿ ಶಾಸಕ ರವಿಕಾಂತ ಪಾಟೀಲ್ ಮತ್ತು ಸಹಚರರು ಮಾಡಿದ್ದಾರೆ.
ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.