ಮಂಡ್ಯ: ಮರಳು ದಂಧೆಕೋರರನ್ನು ಪ್ರಶ್ನೆ ಮಾಡಿದ್ದಕ್ಕೆ ನಾಲ್ವರು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಅಟ್ಟಹಾಸ ನಡೆಸಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕೊರವನಗುಂದಿ ಗ್ರಾಮದ ಬಳಿ ನಡೆದಿದೆ.
ಎಸ್‍ಪಿ ಸ್ಕ್ವಾಡ್‍ಗೆ ಸೇರಿದ ಗುರುಮೂರ್ತಿ, ಶಶಿ, ಹರೀಶ್, ಮತ್ತು ದೇವರಾಜು ಮರಳು ದಂಧೆಕೋರರಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ. ಗುರುವಾರ ರಾತ್ರಿ ಪೊಲೀಸ್ ಸಿಬ್ಬಂದಿ ಎಂದಿನಂತೆ ರೌಂಡ್ಸ್ ಗೆ ಹೋಗಿದ್ದಾರೆ. ಈ ಸಂದಂರ್ಭದಲ್ಲಿ ರಾತ್ರಿ ಸುಮಾರು 11 ಗಂಟೆಗೆ ಎರಡು ಟ್ರ್ಯಾಕ್ಟರ್‍ನಲ್ಲಿ ಮರಳು ತುಂಬಿಕೊಂಡು ಬರುವುದನ್ನು ನಾಲ್ವರು ಪೊಲೀಸರು ಗಮನಿಸಿದ್ದಾರೆ. ಈ ಬಗ್ಗೆ ಟ್ರ್ಯಾಕ್ಟರ್ ಚಾಲಕರನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಮರಳು ದಂಧೆಕೋರರು ತಕ್ಷಣ ತಮ್ಮವರನ್ನು ಸ್ಥಳಕ್ಕೆ ಕರೆಸಿಕೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
Advertisement
Advertisement
ನಂತರ ಅಲ್ಲಿಂದ ಪೊಲೀಸರು ತಪ್ಪಿಸಿಕೊಂಡು ಹೋಗಿ ನಾಗಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ನಾಗಮಂಗಲ ಪೊಲೀಸರು ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕೆ ಬಂದು ಮೂವರು ಮರಳು ದಂಧೆಕೋರರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.
Advertisement
ಈ ಹಿಂದೆ ನಾಗಮಂಗಲ ಡಿವೈಎಸ್‍ಪಿ ಆಗಿದ್ದ ಸವಿತಾ ಹೂಗಾರ್ ಅವರ ವಾಹನಕ್ಕೆ ಡಿಕ್ಕಿ ಹೊಡೆಸಿ ಕೊಲ್ಲಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೂ ಕೂಡ ಹಲ್ಲೆ ನಡೆದಿತ್ತು. ಇದೀಗ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಇದರಿಂದ ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ.