ಧಾರವಾಡ: ವಿದ್ಯಾಕಾಶಿ ಅಂತಾನೇ ಫೇಮಸ್. ಆದರೆ ಈ ವಿದ್ಯಾನಗರಿಯ ಕಾಲೇಜೊಂದರಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಈ ಹೇಯ ಕೃತ್ಯದಿಂದ ಧಾರವಾಡ ಖ್ಯಾತಿಗೆ ಮಸಿ ಬಳಿದಂತಾಗಿದೆ.
ಹೌದು. ಧಾರವಾಡದ ವಿಶ್ವೇಶ್ವರಯ್ಯ ವಿಜ್ಞಾನ ಪಿಯು ಕಾಲೇಜ್‍ನಲ್ಲಿ ವಿದ್ಯಾರ್ಜನೆ ಮಾಡುವ ಜಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರೋ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿರೋದು ತಲೆತಗ್ಗಿಸುವ ವಿಚಾರವಾಗಿದೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೇ ಸಂಸ್ಥೆಯ ಅಧ್ಯಕ್ಷ ಬಸವರಾಜ್ ಪರಾರಿಯಾಗಿದ್ದು, ಪ್ರಾಚಾರ್ಯ ಮಹದೇವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕಾಲೇಜ್ ಎದುರು ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು, ಪ್ರತಿಭಟನೆ ಸಹ ನಡೆಸಿ, ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜ್‍ನ ಅಧ್ಯಕ್ಷನ ವರ್ತನೆಯ ಬಗ್ಗೆ ನೊಂದ ವಿದ್ಯಾರ್ಥಿನಿ ಎಫ್‍ಐಆರ್‍ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ವಿದ್ಯಾರ್ಥಿನಿಯನ್ನು ಪುಸಲಾಯಿಸಿ ದಾಂಡೇಲಿಗೆ ಕರೆದುಕೊಂಡು ಹೋಗಿ ಜ್ಯೂಸ್ ಅಂತಾ ಹೇಳಿ ಬಿಯರ್ ಕುಡಿಸಿ, ಆಕೆ ನಿದ್ದೆಗೆ ಜಾರಿದಾಗ ದೈಹಿಕ ಸಂಪರ್ಕ ಮಾಡಿದ್ದಾನಂತೆ. ಇಂತಹ ನೀಚ ಕೃತ್ಯದಿಂದ ಬೇಸತ್ತ ವಿದ್ಯಾರ್ಥಿನಿಯ ನೋವು ಕೇಳಬೇಕಾದ ಪ್ರಾಚಾರ್ಯನೇ ಕಾಮುಕ ಅಧ್ಯಕ್ಷನ ಜೊತೆ ವಿದ್ಯಾರ್ಥಿನಿಯರನ್ನು ಕಳುಹಿಸಿ ಕೊಡುತ್ತಿದ್ದ ಎನ್ನಲಾಗಿದೆ.
ವಿಶ್ವೇಶ್ವರಯ್ಯ ಕಾಲೇಜ್‍ನ ವಿದ್ಯಾರ್ಥಿಗಳು ಮತ್ತು ಪಾಲಕರು ಡಿಡಿಪಿಯು ಕಚೇರಿಗೆ ಕೂಡಾ ದೂರು ನೀಡಿದ್ದು, ಕಾಲೇಜ್‍ನ್ನು ಸರ್ಕಾರ ವಶಕ್ಕೆ ಪಡೆಯಬೇಕೆಂಬ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಭಾರ ಡಿಡಿಪಿಯು ಮಾತನಾಡಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳುವುದಾಗಿದೆ ತಿಳಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರ ಹತ್ಯೆಗೈದ ಮಗ
ಇಂತಹ ನೀಚ ಕೃತ್ಯದಿಂದ ಇಲ್ಲಿಗೆ ಕಲಿಯಲು ಬಂದಿರೋ ಹೆಣ್ಣು ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಆಯಾಕಾಲೇಜ್‍ಗಳಲ್ಲಿ ವಿದ್ಯಾರ್ಥಿನಿಯರ ದೂರು ಕೇಳೋಕೆ ಅಂತಾನೇ ಮಹಿಳಾ ಸೆಲ್ ಕಡ್ಡಾಯವಾಗಿ ಮಾಡಬೇಕು. ಆದರೆ ಆ ಕಾರ್ಯ ಧಾರವಾಡದಲ್ಲಿ ಆಗದೇ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ