ಬೆಂಗಳೂರು: ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ನಲ್ಲಿ ಹಣಕ್ಕಾಗಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಮಧುಕರ್ ಪೊಲೀಸ್ ವಶದಲ್ಲಿದ್ದು, ಇದೀಗ ಭಯಾನಕ ಮಾಹಿತಿಯೊಂದನ್ನ ಹೊರಹಾಕಿದ್ದಾನೆ.
`ನನಗೆ ಮಹಿಳೆಯರನ್ನು ಕಂಡ್ರೇ ಆಗಲ್ಲ. ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ’ ಅಂತಾ ಎಟಿಎಂ ಹಂತಕ ಮಧುಕರ್‍ರೆಡ್ಡಿ ಹೊಸ ಸ್ಟೇಟ್‍ಮೆಂಟ್ ಕೊಟ್ಟಿದ್ದಾನೆ. ಅದಕ್ಕೆ ಮಹಿಳಾ ಜೆಡ್ಜ್ ಕಾರಣವಂತೆ..!
ಆಂಧ್ರದ ಧರ್ಮಾವರಂ, ಪಿಲೆರೋ, ವಿಜಯವಾಡ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಧುಕರ ರೆಡ್ಡಿ ನಡೆಸಿರೋ ಅಟ್ಟಹಾಸ ಒಂದೆರೆಡಲ್ಲ. ಎರಡು ಮರ್ಡರ್ ಕೇಸ್‍ಗಳು, ಒಂದು ಕೊಲೆ ಯತ್ನ ಕೇಸ್‍ಗಳ ವಿಚಾರಣೆ ನಡೆಯುತ್ತಿವೆ. ಈ ಕೇಸ್‍ಗಳಿಗೂ ಮುನ್ನ ತನ್ನ ಹುಟ್ಟೂರಿನಲ್ಲಿ ಜಮೀನು ವಿವಾದವೊಂದಕ್ಕೆ ಸಂಬಂಧಪಟ್ಟಂತೆ, ಚಿಕ್ಕಪ್ಪನ ಮಗನ ಮೇಲೆ ಬಾಂಬ್ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ತೀರ್ಪಿನ ವೇಳೆ ಮಹಿಳಾ ಜಡ್ಜ್‍ವೊಬ್ಬರು ಮಧುಕರ್ ರೆಡ್ಡಿಗೆ ಕಠಿಣ ಶಿಕ್ಷೆ ವಿಧಿಸಿದ್ದರಂತೆ. ಆಗ ಮಧುಕರ್ ರೆಡ್ಡಿ ಹಲ್ಲು ನೋವಿನ ನೆಪ ಹೇಳಿ ಎಸ್ಕೇಪ್ ಆಗಿದ್ದ. ಅಲ್ಲಿಂದೀಚೆಗೆ ಆಂಧ್ರದ ಮೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಣಕ್ಕಾಗಿ ಇಬ್ಬರು ಮಹಿಳೆಯನ್ನು ಕೊಲೆ ಮಾಡಿದ್ರೆ, ಒಬ್ಬರ ಮೇಲೆ ಕೊಲೆ ಯತ್ನ ಮಾಡಿದ್ದ. ಆಗಿನಿಂದ ನನಗೆ ಮಹಿಳೆಯರನ್ನ ಕಂಡ್ರೆ ಆಗೋದಿಲ್ಲ ಎಂದಿದ್ದಾನೆ.
ಇದೇ ಮನಸ್ಥಿತಿಯಲ್ಲಿದ್ದ ಈ ಪಾತಕಿ, ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆಯನ್ನು ಹಣಕ್ಕಾಗಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಬೆಂಗಳೂರು ಪೊಲೀಸರ ಕೈಗೆ ಸಿಕ್ಕ ಮೇಲಷ್ಟೇ ಈ ವಿಕೃತ ಮನಸ್ಥಿಯ ಮತ್ತಷ್ಟು ಭಯಾನಕ ವಿಷಯಗಳು ಬಹಿರಂಗವಾಗಬೇಕಿದೆ.
ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿ ಇನ್ನೇನು ಬೆಂಗಳೂರು ಪೊಲೀಸರ ವಶಕ್ಕೆ ಬಂದೇ ಬಿಟ್ಟ ಅಂತ ಅಂದುಕೊಳ್ಳುವಾಗಲೇ ಸೀಮಾಂದ್ರ ಪೊಲೀಸ್ರು ಕೋರ್ಟಿಗೆ ಮತ್ತೊಂದು ಅರ್ಜಿ ಹಾಕಿದ್ದಾರೆ. ನಮ್ಮ ಕೇಸ್‍ಗಳು ಇವೆ. ಹಾಗಾಗಿ ನಮ್ಮ ಅರ್ಜಿಗೆ ಆದ್ಯತೆ ಕೊಡಿ ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೆ ಫೆಬ್ರವರಿ 28ರ ವರೆಗೆ ಮಧುಕರ್ ರೆಡ್ಡಿ ಬೆಂಗಳೂರು ಪೊಲೀಸರಿಗೆ ಸಿಗೋದು ಅನುಮಾನ.