ಬೀಜಿಂಗ್: 30ಕ್ಕೂ ಹೆಚ್ಚು ವಾಹನಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 18 ಜನ ಸಾವನ್ನಪ್ಪಿರುವ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಅನ್‍ಹೂಯ್ ಪ್ರಾಂತ್ಯದಲ್ಲಿ ಬುಧವಾರದಂದು ಈ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ 21 ಮಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ನಿರ್ದಿಷ್ಟ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ದಟ್ಟ ಮಂಜು ಆವರಿಸಿದ್ದರಿಂದ ಮೊದಲು ಸಣ್ಣ ಡಿಕ್ಕಿಯಾಗಿದ್ದು ನಂತರ ಸಾಕಷ್ಟು ವಾಹನಗಳ ಮಧ್ಯೆ ಸರಣಿ ಅಪಘಾತಕ್ಕೆ ಎಡೆ ಮಾಡಿಕೊಟ್ಟಿದೆ ಎನ್ನಲಾಗಿದೆ.
ದೊಡ್ಡ ಟ್ರಕ್‍ಗಳು, ಬಸ್‍ಗಳು ಸೇರಿದಂತೆ 30ಕ್ಕೂ ಹೆಚ್ಚು ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿದ್ದು ಕೆಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ರಸ್ತೆಯಲ್ಲೇ ಧಗಧಗನೆ ಉರಿದಿವೆ.
ಅಪಘಾತದ ನಂತರದ ದೃಶ್ಯಾವಳಿಯನ್ನು ಸ್ಥಳಿಯರು ಸೆರೆಹಿಡಿದಿದ್ದು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೆಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿರೋದನ್ನ ಕಾಣಬಹುದು. ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಇಲ್ಲಿನ ಮಾಧ್ಯಮವೊಂದರ ಪ್ರಕಾರ ಹೆಲಿಕಾಪ್ಟರ್‍ವೊಂದನ್ನು ಫ್ಲೈಯಿಂಗ್ ಆಂಬುಲೆನ್ಸ್ ಆಗಿ ಬಳಸಿಕೊಳ್ಳಲಾಗಿದೆ. ವಾಹನಗಳ ಅವಶೇಷಗಳಿಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು 17 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.
ಈ ರಸ್ತೆಯಲ್ಲಿ ಸಂಚಾರ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರೊಂದಿಗೆ ರಕ್ಷಣಾ ತಂಡ ಕಾರ್ಯ ನಿರ್ವಹಿಸುತ್ತಿದೆ.