ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದ (Papua New Guinea) ಎಂಗಾ ಪ್ರಾಂತ್ಯದಲ್ಲಿ ಭಾರೀ ಭೂಕುಸಿತ (Landslide) ಸಂಭವಿಸಿದ್ದು, ಸುಮಾರು ನೂರು ಜನರು ಸಾವನ್ನಪ್ಪಿದ್ದಾರೆ.
ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಭೂಕುಸಿತ ಸಂಬಂಧ ವರದಿ ಮಾಡಿದೆ. ಪಪುವಾ ನ್ಯೂಗಿನಿಯಾದ ಕಾಕಲಂ ಎಂಬ ದೂರದ ಹಳ್ಳಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ವಿಯೆಟ್ನಾಂನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – 14 ಮಂದಿ ಬಲಿ
ಮುಂಜಾನೆ ಜನರು ಇನ್ನೂ ನಿದ್ರೆಯಲ್ಲಿದ್ದಾಗ ಇದು ಸಂಭವಿಸಿದೆ. ಪರ್ವತದ ಬದಿಯು ಜಾರಿ ಮನೆಗಳು ನೆಲಸಮವಾಗಿವೆ. ಸುಮಾರು 100 ಕ್ಕೂ ಹೆಚ್ಚು ಜನರು ನೆಲದಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಪೋರ್ಗೆರಾ ವುಮೆನ್ ಇನ್ ಬ್ಯುಸಿನೆಸ್ ಅಸೋಸಿಯೇಷನ್‌ನ ಅಧ್ಯಕ್ಷೆ ಎಲಿಜಬೆತ್ ಲಾರುಮಾ ತಿಳಿಸಿದ್ದಾರೆ.
ಶವಗಳನ್ನು ಗ್ರಾಮಸ್ಥರು ಹೊರತೆಗೆಯುತ್ತಿದ್ದಾರೆ. ಸಾವಿನ ಸಂಖ್ಯೆ 100 ಕ್ಕಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ನಿವಾಸಿಗಳು ಮಣ್ಣಿನ ಅವಶೇಷ ಮತ್ತು ಮರಗಳ ಕೆಳಗೆ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುತ್ತಿರುವ ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ತೀವ್ರ ಪ್ರಕ್ಷುಬ್ಧತೆಯಿಂದ ಕುಸಿದ ಸಿಂಗಾಪುರ್ ಏರ್‌ಲೈನ್ಸ್‌ನಲ್ಲಿದ್ದ 22 ಮಂದಿಯ ಬೆನ್ನುಮೂಳೆಗೆ ಗಾಯ!
ದೊಡ್ಡ ದೊಡ್ಡ ಬಂಡೆಗಳು, ಮರಗಳು, ಕಟ್ಟಡಗಳ ಅವಶೇಷಗಳಡಿ ಮೃತದೇಹಗಳು ಸಿಲುಕಿಕೊಂಡಿವೆ. ಹೀಗಾಗಿ ದೇಹಗಳನ್ನು ಹೊರತೆಗೆಯುವುದು ಕಷ್ಟವಾಗಿದೆ. ಭೂಕುಸಿತದಿಂದಾಗಿ ಚಿನ್ನದ ಗಣಿ ಇರುವ ಪೋರ್ಗೆರಾ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯನ್ನು ಸಹ ನಿರ್ಬಂಧಿಸಿದೆ.