ಬೆಂಗಳೂರು: ವಿಶ್ವಾಸ ಮತಯಾಚನೆ ನಿರ್ಣಯದ ಮೇಲಿನ ಚರ್ಚೆ ನೆಪದಲ್ಲಿ ದೋಸ್ತಿ ಸರ್ಕಾರ ಅನುಸರಿಸುತ್ತಿರುವ ವಿಳಂಬ ಹಾಗೂ ಕಾಲಹರಣ ತಂತ್ರ ಮುಂದುವರಿದಿದೆ. ಸೋಮವಾರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಾಪ ನಡೆದಿದೆ.
ವಿಶ್ವಾಸ ಮತಯಾಚನೆ ಮಾಡದೆ ಶುರುವಾದ ಕಲಾಪ ಬರೀ ಗದ್ದಲ, ಗಲಾಟೆಯಲ್ಲೇ ನಡೆದಿದೆ. ಸೋಮವಾರ ಬೆಳಗ್ಗೆ 11.30ಕ್ಕೆ ವಿಶ್ವಾಸಮತದ ಭರವಸೆ, ಮಧ್ಯಾಹ್ನ 12ಕ್ಕೆ ಆಪರೇಷನ್ ಕಮಲ, ಮಧ್ಯಾಹ್ನ 1 ಗಂಟೆ ಐಎಂಎ ಬಿರಿಯಾನಿ ಹೀಗೆ ಹಲವು ವಿಚಾರಗಳ ಚರ್ಚೆ ನಡೆಯುತ್ತಲೇ ಇತ್ತು. ಮಧ್ಯಾಹ್ನ 3.30ಕ್ಕೆ ಕಲಾಪ ಮುಂದೂಡಿಕೆಯ ತಂತ್ರ ಶುರುವಾಗಿದ್ದು, 5 ಗಂಟೆಯಾಗುತ್ತಿದ್ದಂತೆ ಬಿಜೆಪಿಯ ಜೆ.ಸಿ. ಮಾಧುಸ್ವಾಮಿ, ಸಭಾಧ್ಯಕ್ಷರು ನೀಡಿದ ಭರವಸೆಯನ್ನು ಇಂದಾದರೂ ಈಡೇರಿಸಿ ಎಂದು ಮನವಿ ಮಾಡಿದರು.
Advertisement
Advertisement
ಚರ್ಚೆ ಮಾಡಲು ಸಾಕಷ್ಟು ವಿಷಯಗಳಿವೆ, ಮೊದಲ ಬಾರಿಗೆ ಆಯ್ಕೆಯಾದ ನಮಗೂ ಅವಕಾಶ ಕೊಡಿ ಎಂದು ಪಟ್ಟು ಹಿಡಿದ ಕಾಂಗ್ರೆಸ್-ಜೆಡಿಎಸ್‍ನ ಶಾಸಕರು ಗದ್ದಲ ಎಬ್ಬಿಸಿದ್ದರು. ಅಲ್ಲದೇ ತಮ್ಮ ಆಸನಗಳನ್ನು ಬಿಟ್ಟು, ವಿಧಾನಸಭೆಯ ಸಭಾಂಗಣದ ಮೊದಲ ಆಸನಗಳ ಬಳಿ ಗಲಾಟೆ ಮಾಡತೊಡಗಿದರು. ಇದರಿಂದಾಗಿ ಸದನದಲ್ಲಿ ಕೋಲಾಹಲ ಉಂಟಾಗಿತ್ತು.
Advertisement
Advertisement
ಈ ವೇಳೆ ಸಭಾಧ್ಯಕ್ಷರ ಕೊಠಡಿಗೆ ತೆರಳಿದ ಸಿಎಂ, ಸಿದ್ದರಾಮಯ್ಯ ಹಾಗೂ ಸಚಿವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವಂತೆ ಮನವಿ ಮಾಡಿದರು. ಆದರೆ ಅದಕ್ಕೆ ಸಭಾಧ್ಯಕ್ಷರು ಒಪ್ಪಲಿಲ್ಲ. ಬದಲಿಗೆ 9 ಗಂಟೆಯ ಒಳಗಡೆ ನಾನೇ ರಾಜೀನಾಮೆ ಕೊಡುತ್ತೇನೆ ಎಂದು ಬೆದರಿಕೆವೊಡ್ಡಿದ್ದರು. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಮತ್ತೆ ಗಲಾಟೆ ಮಾಡಿದರು. ಆಗ ಎದ್ದು ನಿಂತ ಸಿಎಂ, ಮೈತ್ರಿ ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಯಾರೊಬ್ಬರೂ ಅದಕ್ಕೆ ಸೊಪ್ಪು ಹಾಕಲಿಲ್ಲ. ಬಳಿಕ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಎಲ್ಲರನ್ನೂ ಗದರಿ ತಮ್ಮ ಆಸನಗಳಲ್ಲಿ ಕೂರುವಂತೆ ಮಾಡಿದರು.
ಇಡೀ ರಾಜ್ಯದ ಜನರು ನಮ್ಮ ನಡವಳಿಕೆಗಳನ್ನು ನೋಡುತ್ತಿದ್ದಾರೆ. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ನಾನು ರಾತ್ರಿ 11 ಗಂಟೆಗೆಯವರೆಗೂ ಇಲ್ಲಿಯೇ ಕೂರುತ್ತೇನೆ. ಯಾರು ಬೇಕಾದರೂ ಚರ್ಚೆ ಮಾಡಿ. ಇವತ್ತೇ ವಿಶ್ವಾಸಮತದ ನಿರ್ಣಯದ ಪ್ರಕ್ರಿಯೆಯನ್ನು ಮುಗಿಸೋಣ ಎಂದು ಸ್ಪೀಕರ್ ಹೇಳಿದರು. ಸಿದ್ದರಾಮಯ್ಯನವರು ಎದ್ದು ನಿಂತು ಮಂಗಳವಾರ ಎಲ್ಲದ್ದಕ್ಕೂ ಅಂತ್ಯ ಹಾಡೋಣ ಎಂದಾಗ ಸ್ಪೀಕರ್ ಎಷ್ಟು ಗಂಟೆಯ ಒಳಗಡೆ ಮುಗಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ ರಾತ್ರಿ 8 ಗಂಟೆ ಎಂದಾಗ ಸ್ಪೀಕರ್ ಇಷ್ಟು ಸಮಯ ನೀಡುವುದಿಲ್ಲ. ಸಂಜೆ 4 ಗಂಟೆಗೆ ಚರ್ಚೆ ಮುಗಿಯಬೇಕು ನಂತರ ಸಿಎಂ ಮಾತನಾಡಿ 6 ಗಂಟೆಗೆ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದು ಹೇಳಿ ಕಲಾಪವನ್ನು ಮುಂದೂಡಿದರು.
ಒಟ್ಟಿನಲ್ಲಿ ಬೆಳಗ್ಗೆಯೂ ಭಾಷಣ, ಮಧ್ಯಾಹ್ನವೂ ಭಾಷಣ, ಮಧ್ಯರಾತ್ರಿಯವರೆಗೂ ಬರೀ ಭಾಷಣ ನಡೆದಿದ್ದು, ಮಿಡ್‍ನೈಟ್‍ವರೆಗೂ ಬರೀ ಮಾತಿನ ಸಮರದಲ್ಲಿ ಕಲಾಪ ಮುಗಿದು ಹೋಯಿತು.