– ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ ಎಂದ ವಿಪಕ್ಷ ನಾಯಕ
ಬೆಂಗಳೂರು: ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ವಾಲ್ಮೀಕಿ ನಿಗಮದ ಹಗರಣ ಪ್ರತಿಧ್ವನಿಸಿದೆ. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka), ನಿಯಮ 69ರ ಅಡಿಯಲ್ಲಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅಕ್ರಮ ಪ್ರಕರಣ (Valmiki Corporation Corruption Scam )ಕುರಿತು ಚರ್ಚೆಗೆ ಅವಕಾಶ ಕೋರಿದರು. ಪ್ರಶ್ನೋತರ ಕಲಾಪ ಬಳಿಕ ಚರ್ಚೆಗೆ ಅವಕಾಶ ನೀಡಲಾಯಿತು.
ಬಳಿಕ ಮಾತು ಆರಂಭಿಸಿದ ಆರ್. ಅಶೋಕ್, ದಲಿತರ ಹಣ ಲೂಟಿ ಮಾಡಲಾಗಿದೆ. ಲೂಡಿ ಹೊಡೆದು ಬೇರೆ ರಾಜ್ಯಗಳಿಗೆ ಕಳಿಸಿಕೊಡಲಾಗಿದೆ. ಈತರಹದ ಹಗರಣ ರಾಜ್ಯದಲ್ಲಿ ಇದೇ ಮೊದಲು. ಕಟಾಕಟ್ ಅಂತ ನೂರಕ್ಕೆ ನೂರು ದಲಿತರ ಹಣ (Dalits Money) ಲೂಟಿ ಆಗಿದೆ. ಇದು ಕರ್ನಾಟಕ ಇತಿಹಾಸಕ್ಕೆ ಕಪ್ಪು ಚುಕ್ಕೆ. ನಿಗಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದ ಹೆಡ್ ಮಾಸ್ಟರ್ ಸಿಎಂ ಕೈಚೆಲ್ಲಿ ಕೂತಿದ್ರು:
ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ. ಸತ್ತಿರುವ ಚಂದ್ರಶೇಖರನ್ ದಲಿತ, ಲೂಟಿ ಆಗಿರೋದು ದಲಿತರ ಹಣ. 187 ಕೋಟಿ ರೂ. ಕಟಾಕಟ್ ಅಂತ ವರ್ಗಾವಣೆ ಆದಾಗ ಸರ್ಕಾರ ಕಣ್ಮುಚ್ಚಿ ಕೂತಿತ್ತು. ಸರ್ಕಾರದ ಹೆಡ್ ಮಾಸ್ಟರ್ ಸಿಎಂ ಅವರೇ ಕೈಚೆಲ್ಲಿ ಕೂತಿದ್ರು ಎಂದರು. ಇದಕ್ಕೆ ಗರಂ ಆದ ಸಿಎಂ ನಾನು ವರ್ಗಾವಣೆ ಮಾಡು ಅಂತ ಹೇಳಿದ್ನಾ? ಎಂದು ತಿರುಗೇಟು ಕೊಟ್ಟರು. ಮತ್ತೆ ಮಾತು ಮುಂದುವರಿಸಿದ ಅಶೋಕ್, ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಮಾಜಿ ಸಚಿವ, ಶಾಸಕ, ನಿಗಮದ ಅಧಿಕಾರಿಗಳು, ಹವಾಲಾ ದಂಧೆಕೋರರು, ಬ್ಯಾಂಕಿನವ್ರು ಈ ಐದು ವರ್ಗದವರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
187 ಕೋಟಿ ಅಲ್ಲ, 89 ಕೋಟಿ ರೂ. ಅಕ್ರಮ:
ಅಶೋಕ್ ಚರ್ಚೆ ವೇಳೆ ಸಿಎಂ ಮಧ್ಯಪ್ರವೇಶಿಸಿದ ಸಿಎಂ, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು ಜಾರಿ ನಿರ್ದೇಶನಾಲಯದವರು ಅಕ್ರಮದಲ್ಲಿ ಅವರ ಪಾತ್ರದ ಬಗ್ಗೆ ನಾಗೇಂದ್ರ ಒಪ್ಕೊಂಡಿಲ್ಲ. ಇದು ರಿಮ್ಯಾಂಡ್ ಅರ್ಜಿಯಲ್ಲಿ ಕೊಟ್ಟಿರುವ ಮಾಹಿತಿ. ಇದು ಒಪ್ಪಿತ ಸತ್ಯಾಂಶ ಅಲ್ಲ. ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಆಗಿಲ್ಲ. 89.62 ಕೋಟಿ ರೂ. ಅಕ್ರಮ ಆಗಿದೆ. ತಪ್ಪು ಮಾಹಿತಿ ಹೋಗಬಾರದು ಅಂತ ಹೇಳಿದರು. ಈ ವೇಳೆ ಘೋಷಣೆ ಕೂಗಿದ ಬಿಜೆಪಿ ಸದಸ್ಯರು ನಾನು ಯಾರನ್ನೂ ಡಿಫೆಂಡ್ ಮಾಡ್ಕೊಳ್ತಿಲ್ಲ, ಯಾರ ರಕ್ಷಣೆಯೂ ಮಾಡ್ತಿಲ್ಲ. 187 ಕೋಟಿ ರೂ. ಲೂಟಿಯಾಗಿರೋದನ್ನ ಯಾರೂ ಒಪ್ಪಿಕೊಂಡಿಲ್ಲ, ನಾನಾಗಲೀ, ನಾಗೇಂದ್ರ ಆಗಲೀ ಒಪ್ಪಿಕೊಂಡಿಲ್ಲ. ಇದು ಇಡಿಯವ್ರು ಹೇಳಿರೋದು, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು ಅಂತ ಸಿಎಂ ಸ್ಪಷ್ಟನೆ ನೀಡಿದರು.
6 ಪುಟಗಳ ಡೆತ್ ನೋಟ್ ಓದಿದ ಅಶೋಕ್:
ಮತ್ತೆ ಚರ್ಚೆ ಆರಂಭಿಸಿದ ಅಶೋಕ್, ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಡೀಲ್ ನಡೆದಿದ್ದು ಶಾಂಗ್ರೀಲಾ ಹೊಟೇಲ್ ನಲ್ಲಿ. ಈ ಲೂಟಿ ಹಣ ಚಂದ್ರಶೇಖರನ್ ಆತ್ಮಹತ್ಯೆಯಿಂದ ಬಯಲಿಗೆ ಬಂತು. ಆ ಆಪಾದನೆ ತಮ್ಮ ಮೇಲೆ ಬರಬಾರದು ಅಂತ ದಲಿತ ಚಂದ್ರಶೇಖರನ್ ಬಲಿದಾನ ಆಗಿದೆ ಎಂದರಲ್ಲದೇ ಸಾವಿಗೂ ಮುನ್ನ ಚಂದ್ರಶೇಖರನ್ ಬರೆದಿದ್ದ 6 ಪುಟಗಳ ಡೆತ್ ನೋಟ್ ಓದಿದರು. ಡೆತ್ ನೋಟ್ ನಲ್ಲಿ ಯಾರು ಸುಳ್ಳು ಬರೆಯಲ್ಲ, ಸಾಯುವಾಗ ಯಾರೂ ಸುಳ್ಳು ಹೇಳಲಲ್ಲ. ಡೆತ್ ನೋಟ್ ನಲ್ಲಿ ಅಕ್ರಮದ ಎಲ್ಲ ವಿವರ ಇದೆ. ಹೇಗೆ ಡೀಲ್ ನಡೆದಿದೆ ಅಂತ ಅವರು ವಿವರಿಸಿರುವುದಾಗಿ ಅಶೋಕ್ ಹೇಳಿದರು.
ಇವರಿಗೇ ಶಾಪ ತಟ್ಟದೇ ಇರಲ್ಲ:
ಚಂದ್ರಶೇಖರನ್ ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ. ಸರ್ಕಾರಿ ಪ್ರಾಯೋಜಕತ್ವದ ಕೊಲೆ ಇದು. ಒಬ್ಬ ದಲಿತ ಅಧಿಕಾರಿ ಒತ್ತಡಕ್ಕೆ ಒಳಗಾಗಿ ಅವಮಾನ ತಡೆಯದೇ ಆತ್ಮಹತ್ಯೆ ಮಾಡ್ಕೊಂಡ್ರು. ಈ ಜೀವಕ್ಕೆ ಬೆಲೆ ಇಲ್ವಾ? ಸರ್ಕಾರಕ್ಕೆ ಕಣ್ಣಿಲ್ವಾ? ಚಂದ್ರಶೇಖರನ್ ಸತ್ತು 30 ದಿನ ಆಯ್ತಲ್ಲ, ಸರ್ಕಾರ ಏನ್ ಮಾಡ್ತಿದೆ? ಚಂದ್ರಶೇಖರನ್ ಸಾವನ್ನಪ್ಪದೇ ಇದ್ದಿದ್ದರೇ 187 ಕೋಟಿ ಅಕ್ರಮ ಯಾರಿಗೂ ಗೊತ್ತಾಗ್ತಿರಲಿಲ್ಲ. ಅಮಾಯಕ ಚಂದ್ರಶೇಖರನ್ ಹಗರಣವನ್ನ ಬಯಲಿಗೆಳೆದಿದ್ದಾರೆ. ಸಾಕ್ಷಿ ಸಿಕ್ಕಿದೆ, ದುಡ್ಡು ಸಿಕ್ಕಿದೆ, ಬೇನಾಮಿ ಖಾತೆಗಳ ವಿವರ ಗೊತ್ತಾಗಿದೆ, ಕೆಲವರ ಬಂಧನ ಆಗಿದೆ ಇವರಿಗೆ ಶಾಪ ತಟ್ಟದೇ ಇರಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.