ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 135 ಸೀಟುಗಳನ್ನು ಗೆಲ್ಲಿಸುವ ಮೂಲಕ ಮತದಾರ ಕಾಂಗ್ರೆಸ್ (Congress) ಪಕ್ಷಕ್ಕೆ ಬಹುಮತ ಘೋಷಣೆ ಮಾಡಿದ್ದಾನೆ. ಐದು ವರ್ಷದ ಮಹಾ ಅಜ್ಞಾತವಾಸವನ್ನು ಮುಗಿಸಿಕೊಂಡು ಕಾಂಗ್ರೆಸ್ ನಾಯಕರು ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದ್ದಾರೆ. ಬಿಜೆಪಿ ಪರವಾಗಿ ಸ್ಟಾರ್ ನಟರು ಕ್ಯಾಂಪೇನ್ ಮಾಡಿದರೂ, ಅಂದುಕೊಂಡಷ್ಟು ಸೀಟು ಗೆಲ್ಲಲಿಲ್ಲ ಎನ್ನುವ ನೋವಿನ ನಡುವೆಯೂ ಕೆಲ ನಟ ನಟಿಯರು ಹಾಗೂ ನಿರ್ದೇಶಕರು ಕಾಂಗ್ರೆಸ್ ಪಕ್ಷದ ಗೆಲುವಿನ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ ರಾಜ್ ಮೊದಲಿನಿಂದಲೂ ಬಿಜೆಪಿ ವಿರೋಧಿ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ. ಆದರೆ, ಅಚ್ಚರಿ ಎನ್ನುವಂತೆ ಬಿಜೆಪಿ ಸರಕಾರದ ವಿರುದ್ಧ ಕೆಲ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಕಿಡಿಕಾರಿದ್ದಾರೆ. ಇನ್ನೂ ಕೆಲವರು ಕಾಂಗ್ರೆಸ್ ಪಕ್ಷದ ಗೆಲುವನ್ನು ಸಂಭ್ರಮಿಸಿದ್ದಾರೆ.
- Advertisement
- Advertisement
ಗೂಗ್ಲಿ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ಪವನ್ ಒಡೆಯರ್ (Pawan Wodeyar), ಟ್ವೀಟ್ ಮಾಡಿ, ‘ಸಿಎಂ ಬಸವರಾಜ್ ಬೊಮ್ಮಾಯಿ ಅವರದ್ದು ದುರಹಂಕಾರದ ವ್ಯಕ್ತಿತ್ವ’ ಎಂದಿದ್ದಾರೆ. ‘ಡೊಳ್ಳು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಾಗ ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು. ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ. ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತುಕೊಳ್ಳುವಷ್ಟು ಸಮಯವಿದೆ. ಕನ್ನಡಿಗರು ಮುಟ್ಟಾಳರಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡದಲ್ಲಿ ‘ರಾಮ ಬಾಮಾ ಶ್ಯಾಮ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಕಮಲ್ ಹಾಸನ್ (Kamal Haasan) ಕೂಡ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ‘ರಾಹುಲ್ ಗಾಂಧಿ ಅವರೆ, ಈ ಅದ್ಭುತ ವಿಜಯಕ್ಕೆ ನಿಮಗೆ ಅಭಿನಂದನೆಗಳು. ಗಾಂಧೀಜಿಯವರಂತೆ ನೀವು ಜನರ ಹೃದಯದೊಳಗೆ ನಡೆದುಕೊಂಡು ಹೋದಿರಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು: ಸಿ.ಟಿ ರವಿ
ನಟ ದುನಿಯಾ ವಿಜಯ್ (Dunia Vijay) ಕೂಡ ಟ್ವೀಟ್ ಮಾಡಿದ್ದು, ‘ತಾವು ಪ್ರಜ್ಞಾವಂತ ಮತದಾರರು ಎಂಬುದನ್ನು ಸಾಬೀತುಪಡಿಸಿದ್ದೀರಿ. ಗೆದ್ದವರಿಗೆ ಶುಭಾಶಯಗಳು. ಸೋತವರು ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ. ಸಂಪೂರ್ಣ ಬಹುಮತ ಪಡೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ಶುಭಾಶಯಗಳು. ಸಾಮಾನ್ಯ ಜನ ನೆಮ್ಮದಿಯಿಂದ ಜೀವನ ನಡೆಸುವಂತೆ ಉತ್ತಮ ಆಡಳಿತ ನೀಡಿ’ ಎಂದು ಬರೆದುಕೊಂಡಿದ್ದಾರೆ.
ನಟ ಶಿವರಾಜ್ ಕುಮಾರ್, ಕಾರುಣ್ಯ ರಾಮ್, ನಿರ್ದೇಶಕ ಮಂಸೋರೆ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷದ ಗೆಲುವನ್ನು ಸಂಭ್ರಮಿಸಿದ್ದಾರೆ. ಜೊತೆಗೆ ಉತ್ತಮ ಆಡಳಿತ ಕೊಡಲಿ ಎಂದು ಹಾರೈಸಿದ್ದಾರೆ. ನಿನ್ನೆಯಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಶುಭಾಶಯಗಳನ್ನು ಹೇಳಿದ್ದು, ಚಿತ್ರೋದ್ಯಮಕ್ಕೂ ಪಕ್ಷ ಸಹಕಾರ ನೀಡಲಿ ಎಂದು ಆಶಿಸಿದ್ದಾರೆ.