ಅನೇಕಲ್: ಕೊಲೆ ಆರೋಪಿಯ ಬಂಧನಕ್ಕೆ ತೆರಳಿದ್ದ ವೇಳೆ ಆತ ಪೊಲೀಸರ (Police) ಮೇಲೆ ಹಲ್ಲೆಗೆ ಮುಂದಾಗಿದ್ದು, ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ ಘಟನೆ ಬಂಡಾಪುರ ಸಮೀಪದ ಮಡಿವಾಳದಲ್ಲಿ ನೆಡೆದಿದೆ.
ರೌಡಿಶೀಟರ್ ಸುನೀಲ್ ಅಲಿಯಾಸ್ ಹಾವೇರಿ, ಅನೇಕಲ್‍ಗೆ (Anekal) ಬರುವ ಮಾಹಿತಿ ಆಧರಿಸಿ ಆತನ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಬರುವುದನ್ನು ಗಮನಿಸಿದ ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಅತ್ತಿಬೆಲೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಘವ್ ಗೌಡ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಜಿಗಣಿ ಬಳಿ ರೌಡಿಶೀಟರ್ ಮನೋಜ್ ಗ್ಯಾಂಗ್ ಮೇಲೆ ಅಟ್ಯಾಕ್ ನಡೆದಿತ್ತು. ಈ ಪ್ರಕರಣ ಸಂಬಂಧಿಸಿದಂತೆ ಜಿಗಣಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾದ ಬಳಿಕ ಸುನೀಲ್ ತಲೆಮರೆಸಿಕೊಂಡಿದ್ದ. ಅಲ್ಲದೇ, ಆರೋಪಿ ವಿರುದ್ಧ ಮರಸೂರು ಗೇಟ್ ಪೆಟ್ರೋಲ್ ಬಂಕ್ ಗಲಾಟೆ, ಒಂದು ಕೊಲೆ ಎರಡು ಕೊಲೆ ಯತ್ನ ಸೇರಿದಂತೆ ಒಟ್ಟು 7 ಪ್ರಕರಣಗಳಿವೆ. ಆತನ ವಿರುದ್ಧ ಅರೆಸ್ಟ್ ವಾರೆಂಟ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಶೀಟರ್ ನಡೆಸಿದ ಹಲ್ಲೆಯಿಂದ ವಿನಯ್ ಎಂಬ ಕಾನ್‌ಸ್ಟೇಬಲ್ ಕೈಗೆ ಗಾಯವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ರೌಡಿಶೀಟರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‍ಪಿ ನಾಗೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.