ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಅಬ್ಬರಿಸಿದ್ದಾರೆ. ಪಾಕ್ ಆಲೌಟ್ ಆಗಿದ್ದು, ಟೀಂ ಇಂಡಿಯಾ ಗೆಲುವಿಗೆ 147 ರನ್‌ಗಳ ಗುರಿ ನೀಡಿದೆ.
ಭಾನುವಾರದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ, ಮಧ್ಯಮ ಕ್ರಮಾಂಕದಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಅಂತಿಮವಾಗಿ 19.1 ಓವರ್‌ಗೆ ಪಾಕ್ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದೆ.
ಆರಂಭಿಕರಾಗಿ ಕಣಕ್ಕಿಳಿದ ಸಾಹಿಬ್‌ಜಾದಾ ಫರ್ಹಾನ್, ಫಖರ್ ಜಮಾನ್ ಜೋಡಿ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವಾಡಿ ಗಮನ ಸೆಳೆದರು. ಫರ್ಹಾನ್ 38 ಬಾಲ್‌ಗೆ ಅರ್ಧಶತಕ (57 ರನ್) ಗಳಿಸಿದರು. ವರುಣ್ ಚಕ್ರವರ್ತಿ 9ನೇ ಓವರ್‌ನಲ್ಲಿ ಮೊದಲ ವಿಕೆಟ್ ಪಡೆಯುವ ಮೂಲಕ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.
ತಂಡದ ಮೊತ್ತ 113 ಇದ್ದಾಗ ಸೈಮ್ ಅಯೂಬ್ ಔಟಾದರು. ಈ ಮಧ್ಯೆ ಜಮಾನ್‌ಗೆ ಯಾವೊಬ್ಬ ಬ್ಯಾಟರ್ ಕೂಡ ಸಾಥ್ ನೀಡಲಿಲ್ಲ. ನಂತರ ಬಂದ ಮೊಹಮ್ಮದ್ ಹ್ಯಾರಿಸ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. 46 ರನ್ ಗಳಿಸಿದ್ದ ಜಮಾನ್ ಕ್ಯಾಚ್ ನೀಡಿ ಔಟಾದರು.
ಆರಂಭದಲ್ಲಿ ರನ್ ಬಿಟ್ಟುಕೊಟ್ಟಿದ್ದ ಟೀಂ ಇಂಡಿಯಾ ಬೌಲರ್‌ಗಳು ನಂತರ ಪಾಕ್ ವಿರುದ್ಧ ಆರ್ಭಟಿಸಿದರು. ಬ್ಯಾಟರ್‌ಗಳ ಬೆವರಿಳಿಸಿದರು. ವಿಕೆಟ್‌ಗಳು ತರಗೆಲೆಯಂತೆ ಉದುರಿದವು. ಯಾರೊಬ್ಬರು ಕೂಡ ಒಂದಂಕಿ ರನ್ ದಾಟಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಪಾಕಿಸ್ತಾನ 19.1 ಓವರ್‌ಗೆ ಆಲೌಟ್ ಆಗಿ 146 ರನ್ ಗಳಿಸಿತು.
ಟೀಂ ಇಂಡಿಯಾ ಪರ ಸ್ಪಿನ್ನರ್ ಕುಲ್ದೀಪ್ ಯಾದವ್ ಜಾದು ಮಾಡಿದರು. ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಜಸ್ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಿತ್ತರು.