Asia Cup 2023 Final: 6 ವಿಕೆಟ್‌ ಕಿತ್ತು ಹಲವು ದಾಖಲೆ ಬರೆದ ಮೊಹಮ್ಮದ್ ಸಿರಾಜ್‌‌

Public TV
3 Min Read
Siraj

ಕೊಲಂಬೊ: ಟೀಂ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್ ಸಿರಾಜ್‌‌ (Mohammed Siraj) 2023ರ ಏಷ್ಯಾಕಪ್‌ ಫೈನಲ್‌ (Asia Cup 2023 Final) ಪಂದ್ಯದಲ್ಲಿ ಪ್ರಚಂಡ ಬೌಲಿಂಗ್‌ ಪ್ರದರ್ಶನ ತೋರಿದ್ದಾರೆ. ಶ್ರೀಲಂಕಾ ವಿರುದ್ಧ 7 ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟು ಒಟ್ಟು 6 ವಿಕೆಟ್‌ ಪಡೆಯುವ ಮೂಲಕ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ.

ಹೈದರಾಬಾದ್ ಮೂಲದ 29 ವರ್ಷದ ಬಲಗೈ ವೇಗಿ ಸಿರಾಜ್‌, ಏಷ್ಯಾ ಕಪ್ 2023 ಟೂರ್ನಿಯಲ್ಲಿ ತಮ್ಮ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ವೃತ್ತಿಬದುಕಿನ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ. 7 ಓವರ್‌ಗಳಲ್ಲಿ ಒಂದು ಮೇಡಿನ್‌ ಒಳಗೊಂಡಂತೆ 21 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಪಡೆದು ಅಬ್ಬರಿಸಿದ್ದಾರೆ. ಪರಿಣಾಮ ಶ್ರೀಲಂಕಾ (Sri Lanka) ತಂಡ 50 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಯಿತು. ಇದನ್ನೂ ಓದಿ: Asia Cup 2023 Final: ಲಂಕಾ ದಹನ – ಭಾರತಕ್ಕೆ 8ನೇ ಬಾರಿಗೆ ಚಾಂಪಿಯನ್‌ ಕಿರೀಟ

1 2

ಇದೇ ಟೂರ್ನಿಯಲ್ಲಿ ಸಿರಾಜ್‌ ಭಾರತದ ಪರ ಅತಿ ವೇಗವಾಗಿ 5 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಇದು ಸಿರಾಜ್ ಏಕದಿನ ಕ್ರಿಕೆಟ್‌ ವೃತ್ತಿಬದುಕಿನ ಮೊದಲ ಸಾಧನೆಯೂ ಆಗಿದೆ. 1993ರ ಸಿಎಬಿ ಜುಬ್ಲೀ ಟೂರ್ನಿಯ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ ಎದುರು ಅನಿಲ್ ಕುಂಬ್ಳೆ (Anil Kumble) ವೇಗವಾಗಿ 6 ವಿಕೆಟ್‌ ಪಡೆದಿದ್ದು, ಈ ಹಿಂದಿನ ಸಾಧನೆ ಆಗಿತ್ತು. ಇದರೊಂದಿಗೆ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಭಾರತದ ಪರ 50 ವಿಕೆಟ್‌ ಪಡೆದ 4ನೇ ಬೌಲರ್‌ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

IND vs SL 2

ಅಷ್ಟೇ ಅಲ್ಲದೇ ಭಾರತದ ಪರ ಮೊದಲ 10 ಓವರ್‌ಗಳಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ವಿಶೇಷ ಸಾಧನೆ ಮಾಡಿದ್ದಾರೆ. ಜೊತೆಗೆ 2003ರ ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ 16 ಎಸೆತಗಳಲ್ಲಿ 5 ವಿಕೆಟ್‌ ಕಿತ್ತು ವಿಶ್ವದಾಖಲೆ ನಿರ್ಮಿಸಿದ್ದ ಶ್ರೀಲಂಕಾದ ಮಾಜಿ ವೇಗಿ ಚಮಿಂದಾ ವಾಸ್‌ ಅವರ ದಾಖಲೆಯನ್ನೂ ಸಿರಾಜ್‌ ಸರಿಗಟ್ಟಿದ್ದಾರೆ. ಇದನ್ನೂ ಓದಿ: ಸಿರಾಜ್‌ ಬೆಂಕಿ ಬೌಲಿಂಗ್‌, 50 ರನ್‌ಗಳಿಗೆ ಆಲೌಟ್‌ – 39 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದ ಲಂಕಾ

ಸಿರಾಜ್‌ ಬೌಲಿಂಗ್‌ ಮಾಡಿದ 2ನೇ ಓವರ್‌ನಲ್ಲೇ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಅವಕಾಶ ಕೈತಪ್ಪಿದರು ಸಹ ಆ ಓವರ್‌ನಲ್ಲಿ 4 ವಿಕೆಟ್‌ ಕಿತ್ತು ಮಿಂಚಿದರು. ಪಂದ್ಯದ ಮೊದಲ ಓವರ್‌ನಲ್ಲೇ ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ದಾಳಿಗೆ ಓಪನರ್‌ ಕುಶಲ್‌ ಪೆರೆರಾ ಶೂನ್ಯಕ್ಕೆ ಔಟಾದರು. ಈ ಬೆನ್ನಲ್ಲೇ ಶ್ರೀಲಂಕಾ ತಂಡದ ಪೆವಿಲಿಯನ್ ಪರೇಡ್‌ ಶುರುವಾಗಿತ್ತು. ಬುಮ್ರಾ ಮತ್ತು ಸಿರಾಜ್‌ ಬಳಿಕ ದಾಳಿಗಿಳಿದ ಹಾರ್ದಿಕ್‌ ಪಾಂಡ್ಯ ಕೂಡ ಕೇವಲ 3 ರನ್‌ಗಳಿಗೆ 3 ವಿಕೆಟ್‌ ಪಡೆದು ಶ್ರೀಲಂಕಾ ತಂಡವನ್ನು 50 ರನ್‌ಗಳಿಗೆ ಆಲ್‌ಔಟ್‌ ಮಾಡುವಲ್ಲಿ ಯಶಸ್ವಿಯಾದರು. ಇದು 39 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಶ್ರೀಲಂಕಾ ತಂಡ ಭಾರತದ ಎದುರು ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ.

Web Stories

Share This Article