ಚಿಕ್ಕಬಳ್ಳಾಪುರ: ಸೀಟ್ ಬೆಲ್ಟ್ ಹಾಕದ ಹಿನ್ನೆಲೆಯಲ್ಲಿ ಕಾರು ಚಾಲಕನಿಗೆ ದಂಡ ವಿಧಿಸಿದ್ದಕ್ಕೆ ಕಿಡಿಗೇಡಿಗಳು ಎಎಸ್‍ಐ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳಲು ಎಎಸ್‍ಐ ಪೊಲೀಸ್ ಠಾಣೆಗೆ ಓಡಿ ಹೋಗಿ ಜೀವ ಉಳಿಸಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.
ಬಾಗೇಪಲ್ಲಿ ಪೊಲೀಸ್ ಠಾಣೆ ಎದುರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ವಾಹನ ಸವಾರರಿಗೆ ಎಎಸ್‍ಐ ರಾಮಚಂದ್ರಪ್ಪ ದಂಡ ವಿಧಿಸುವ ಕಾಯಕ ಮಾಡುತ್ತಿದರು. ಪಾತಪಾಳ್ಯ ಮೂಲದ ಕಾರು ಚಾಲಕ ರವಿ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಎಎಸ್‍ಐ ರಾಮಚಂದ್ರಪ್ಪ ದಂಡ ವಿಧಿಸಿದ್ದಾರೆ.
Advertisement
Advertisement
ಸಾಕಷ್ಟು ಗಲಾಟೆ ಮಾಡಿ ದಂಡ ಪಾವತಿಸಿದ ಕಾರು ಚಾಲಕ ರವಿ ಪೊಲೀಸರ ಜೊತೆ ವಿನಾಕಾರಣ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಕಾರು ಚಾಲಕನ ಜೊತೆಗೂಡಿದ ಸ್ಥಳೀಯ ಕಿಡಿಗೇಡಿಗಳು ಗುಂಪುಗೂಡಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಗೃಹರಕ್ಷಕ ದಳ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಭಯಭೀತಿಗೊಂಡ ಎಎಸ್‍ಐ ರಾಮಚಂದ್ರಪ್ಪ ಅಲ್ಲಿಯೇ ಹತ್ತಿರದಲ್ಲಿದ್ದ ಪೊಲೀಸ್ ಠಾಣೆಗೆ ಜೀವ ಭಯದಿಂದ ಓಡಿ ಹೋಗಿದ್ದಾರೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
Advertisement
ಈ ಘಟನೆ ನಡೆದ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿಮಿತ್ತ ಬೇರೆಡೆ ತೆರಳಿದರು. ಠಾಣೆ ಬಳಿಯೂ ಜಮಾಯಿಸಿದ ಕಿಡಿಗೇಡಿಗಳು ಪೊಲೀಸರ ವಿರುದ್ಧ ಬಾಯಿಗೆ ಬಂದ ಹಾಗೆ ನಿಂದಿಸಿದ್ದಾರೆ. ಸದ್ಯ ಘಟನೆ ನಂತರ ಕಾರು ಚಾಲಕ ರವಿ ಸೇರಿದಂತೆ ಇತರರ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಕರ್ತವ್ಯಕ್ಕೆ ವಿನಾಕಾರಣ ಅಡ್ಡಿ ಮಾಡಿದ ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.