– ರಾಜ್ಯಕ್ಕೆ 2ನೇ ವಂದೇ ಭಾರತ್ ರೈಲು ಹಾಗೂ ಹೈಸ್ಪೀಡ್ ಬುಲೆಟ್ ರೈಲು ಯೋಜನೆ ಘೋಷಣೆ
ಬೆಂಗಳೂರು: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ (Bengaluru-Mumbai Vande Bharat Sleeper Express) ರೈಲಿಗೆ ಹಸಿರು ನಿಶಾನೆ ತೋರಿದರು.
ಕರ್ನಾಟಕದ ರೈಲು ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಜ್ಯಕ್ಕೆ 2ನೇ ವಂದೇ ಭಾರತ್ ರೈಲು ಹಾಗೂ ಮಹತ್ವಾಕಾಂಕ್ಷೆಯ ಹೈಸ್ಪೀಡ್ ಬುಲೆಟ್ ರೈಲು ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ 2ನೇ ವಂದೇ ಭಾರತ್ ಸ್ಲೀಪರ್ ರೈಲು ಹಾಗೂ ಬೆಂಗಳೂರು-ಹುಬ್ಬಳ್ಳಿ-ಪುಣೆ ನಡುವೆ ನೂತನ ‘ಬುಲೆಟ್ ರೈಲು’ ಯೋಜನೆಯನ್ನು ಘೋಷಿಸಿದ್ದಾರೆ. ಇದಲ್ಲದೇ, ಕರಾವಳಿ ಭಾಗದ ಪ್ರಯಾಣಿಕರಿಗಾಗಿ ಬೆಂಗಳೂರು-ಮಂಗಳೂರು ನಡುವೆ ಶೀಘ್ರದಲ್ಲೇ ವಂದೇ ಭಾರತ್ ರೈಲು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿ ಮಾರ್ಗವಾಗಿ ಮತ್ತೊಂದು ‘ವಂದೇ ಭಾರತ್ ಸ್ಲೀಪರ್’ ರೈಲು ಶೀಘ್ರದಲ್ಲೇ ಆರಂಭವಾಗಲಿದೆ. ಇದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಮುಂದಿನ ಹಂತದಲ್ಲಿ ಉತ್ತರ ಕರ್ನಾಟಕದ ಪ್ರಮುಖ ನಗರವಾದ ಹುಬ್ಬಳ್ಳಿ ಮಾರ್ಗವಾಗಿ ‘ಬೆಂಗಳೂರು ಮತ್ತು ಪುಣೆ’ ನಡುವೆ ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಿಸಲಾಗುವುದು. ಕೇಂದ್ರ ಸರ್ಕಾರದ 3,000 ಕಿಲೋಮೀಟರ್ ಉದ್ದದ ಎರಡನೇ ಹಂತದ ಬುಲೆಟ್ ಟ್ರೈನ್ ಯೋಜನೆಯಲ್ಲಿ ಈ ಮಾರ್ಗವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗುತ್ತದೆ.
ಬೆಂಗಳೂರಿನ ಎಸ್ಎಂವಿಟಿ ರೈಲು ನಿಲ್ದಾಣದಲ್ಲಿ ಇಂದು ನೂತನ ವಂದೇ ಭಾರತ್ ಸ್ಲೀಪರ್ ರೈಲುಗೆ ಹಸಿರು ನಿಶಾನೆ ತೋರಿದರು. ಈ ರೈಲಿನಲ್ಲಿ 16 ಬೋಗಿಗಳಿದ್ದು, ಇದರಲ್ಲಿ ಎಂಟು ಮೋಟಾರ್ ಕಾರು ಬೋಗಿಗಳು, ನಾಲ್ಕು ಟ್ರೇಲರ್ ಕಾರ್ ಬೋಗಿಗಳು, ಎರಡು ನಾನ್ ಡ್ರೈವಿಂಗ್ ಟ್ರೇಲರ್, ಎರಡು ಡ್ರೈವಿಂಗ್ ಟ್ರೇಲರ್ ಕಾರು ಬೋಗಿಗಳು ಇರಲಿವೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿ ಯೋಜನೆಗಳು ಹಾಗೂ ಪ್ರಗತಿಯ ಬಗ್ಗೆ ವಿವರಿಸಿದರು. ಈ ವೇಳೆ ಕೇಂದ್ರ ಸಚಿವರು, ಸಂಸದರು ಭಾಗಿಯಾಗಿದ್ದರು.
ಮೊದಲ ಹಂತದ 4,000 ಕಿ.ಮೀ ಹೈಸ್ಪೀಡ್ ರೈಲು ಯೋಜನೆಯಲ್ಲಿ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಕಾರಿಡಾರ್ಗಳನ್ನು ಘೋಷಿಸಲಾಗಿತ್ತು. ಈ ಯೋಜನೆಗಳಿಂದ ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣದ ಅವಧಿ 73 ನಿಮಿಷಕ್ಕೆ ಹಾಗೂ ಹೈದರಾಬಾದ್ ಪ್ರಯಾಣದ ಅವಧಿ ಕೇವಲ 2 ಗಂಟೆ 10 ನಿಮಿಷಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಎರಡೂ ಮಾರ್ಗಗಳು ಕೇವಲ ಗಡಿ ಭಾಗಕ್ಕೆ ಮಾತ್ರ ಸೀಮಿತವಾಗಿದ್ದರಿಂದ ಕನ್ನಡಿಗರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿರಲಿಲ್ಲ. ಕರ್ನಾಟಕದ ಒಳನಾಡು ಹಾಗೂ ಉತ್ತರ ಕರ್ನಾಟಕವನ್ನು ಬೆಸೆಯುವಂತೆ ಹುಬ್ಬಳ್ಳಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಬುಲೆಟ್ ರೈಲು ಸಂಪರ್ಕ ಕಲ್ಪಿಸಬೇಕೆಂದು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ತೀವ್ರ ಒತ್ತಾಯ ಕೇಳಿಬಂದಿತ್ತು. ಈ ಸಾರ್ವಜನಿಕ ಕೂಗಿಗೆ ಸ್ಪಂದಿಸಿರುವ ರೈಲ್ವೆ ಸಚಿವಾಲಯ, ಇದೀಗ ಬೆಂಗಳೂರು-ಹುಬ್ಬಳ್ಳಿ-ಪುಣೆ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರು-ಮಂಗಳೂರು ನಡುವೆ ಬಹುನಿರೀಕ್ಷಿತ ವಂದೇ ಭಾರತ್ ರೈಲು ಶೀಘ್ರದಲ್ಲೇ ಹಳಿಗೆ ಬರಲಿದೆ. ಈ ಮಾರ್ಗದ ಎಲ್ಲಾ ತಾಂತ್ರಿಕ ಪರೀಕ್ಷೆಗಳು (ಟ್ರಯಲ್ ರನ್) ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಸಚಿವರು ತಿಳಿಸಿದ್ದಾರೆ. ನಾಲ್ಕೈದು ವಾರದಲ್ಲಿ ಕಾರ್ಯಚರಣೆಗೆ ಬರುವ ಭರವಸೆಯನ್ನು ಕೇಂದ್ರ ರೈಲ್ವೆ ಸಚಿವರು ನೀಡಿದ್ದಾರೆ.
