ಕೆರೆಬೇಟೆಯ ಹಾಡು ಬಿಡುಗಡೆಗೊಳಿಸಿದರು ಅಶ್ವಿನಿ ಪುನೀತ್ ರಾಜ್‌ಕುಮಾರ್!

Public TV
2 Min Read
kerebete film

ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ (Kerebete) ಚಿತ್ರ ಬಿಡುಗಡೆಗೊಳ್ಳಲು ದಿನಗಣನೆ ಶುರುವಾಗಿದೆ. ಮಲೆನಾಡು ಸೀಮೆಯ ಭಾಷಾ ಸೊಗಡು, ಅಲ್ಲಿನದ್ದೇ ವಿಶಿಷ್ಟ ಕಥೆಯನ್ನೊಳಗೊಂಡಿರುವ ‘ಕೆರೆಬೇಟೆ’ ಈ ವಾರದ ಬಹುನಿರೀಕ್ಷಿತ ಚಿತ್ರವಾಗಿ ಈಗಾಗಲೇ ದಾಖಲಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಅಂಥಾದ್ದೊಂದು ಭರವಸೆಯನ್ನು ಪಸರಿಸುವಲ್ಲಿ ಗೆಲುವು ಕಂಡಿದೆ. ರಾಜಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡೊಂದು ಇದೀಗ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಒಂದು ಅಚ್ಚುಕಟ್ಟಾದ ಇವೆಂಟ್ ಮೂಲಕ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಈ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

kerebeteಚಿತ್ರತಂಡವೆಲ್ಲ ಭಾಗಿಯಾಗಿದ್ದ ಈ ಇವೆಂಟ್‌ಗೆ ಪ್ರೀತಿಯಿಂದ ಆಗಮಿಸಿದ ಅಶ್ವಿನಿ ಅವರು ‘ಕಣ್ಣುಗಳೇ ಕಳೆದು ಹೋದಾಗ’ ಎಂಬ ಹಾಡನ್ನು ಲೋಕಾರ್ಪಣೆಗೊಳಿಸಿದ್ದಾರೆ. ನಂತರ ಚಿತ್ರತಂಡದೊಂದಿಗೆ ಕಲೆತು ಸಂಭ್ರಮಿಸಿದ್ದಾರೆ. ಅಶ್ವಿನಿ ಬೆಂಬಲದಿಂದಾಗಿ ಬಿಡುಗಡೆಯ ಅಂಚಿನಲ್ಲಿ ‘ಕೆರೆಬೇಟೆ’ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಈ ಹಿಂದೆ ಬಿಡುಗಡೆಗೊಂಡಿದ್ದ ಹಾಡುಗಳ ಮೂಲಕವೂ ಕೆರೆಬೇಟೆ ಕುತೂಹಲ ಮೂಡಿಸಿತ್ತು. ಈಗ ಲಾಂಚ್ ಆಗಹಿರುವ ಈ ಹಾಡಂತೂ ವಿರಹದ ಉರಿಯನ್ನು ಎದೆತುಂಬಾ ಹರವಿ ಕೂತಿರುವ ಯುವ ಮನಸುಗಳನ್ನು ಒಂದೇ ಸಲಕ್ಕೆ ಸೆಳೆಯುವಂತಿದೆ.

kerebete

ಇತ್ತೀಚಿನ ದಿನಗಳಲ್ಲಿ ‘ಕಾಂತಾರ’ (Kantara) ಖ್ಯಾತಿಯ ಪ್ರಮೋದ್ ಮರವಂತೆ (Pramod Maravante) ಚಿತ್ರ ಸಾಹಿತಿಯಾಗಿ ಮಿಂಚುತ್ತಿದ್ದಾರೆ. ಈ ಹಾಡಿಗೂ ಅವರೇ ಸಾಹಿತ್ಯ ಒದಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಂದ ಹಾಡುಗಳ ಸಾಲಿನಲ್ಲಿ ಈ ಗೀತೆ ಬೇರೆಯದ್ದೇ ಸ್ಥಾನ ಗಿಟ್ಟಿಸಿಕೊಳ್ಳುವಷ್ಟು ಶಕ್ತವಾಗಿ ಮೂಡಿ ಬಂದಿದೆ. ಮತ್ತೆ ಮತ್ತೆ ಗುನುಗಿಸಿಕೊಳ್ಳುವ ಛಾತಿ ಇರುವ ಈ ಹಾಡಿನ ಬಗ್ಗೆ ಮೆಚ್ಚುಗೆಯೂ ಮೂಡಿಕೊಳ್ಳಲಾರಂಭಿಸಿದೆ. ಒಟ್ಟಾರೆಯಾಗಿ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇರುವ ಈ ಹೊತ್ತಿನಲ್ಲಿ, ಈ ಹಾಡಿನೊಂದಿಗೆ ಕೆರೆಬೇಟೆಯೆಡೆಗಿನ ಕೌತುಕ ಮತ್ತಷ್ಟು ತೀವ್ರಗೊಂಡಿದೆ.

ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, `ಕೆರೆಬೇಟೆ’ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

Share This Article