ಬೀದರ್: ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಗೆ ರಿಲೀಫ್ ಸಿಕ್ಕಿದ್ದು, ಚುನಾವಣಾ ಅಧಿಕಾರಿಗಳು ನಾಮಪತ್ರವನ್ನು ಅಂಗೀಕಾರಿಸಿದ್ದಾರೆ.
ಅಶೋಕ್ ಖೇಣಿ ಅಮೆರಿಕದ ಪೌರತ್ವ ಹೊಂದಿದ್ದಾರೆ. ಬೇರೆ ದೇಶಗಳಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿ ನೊಂದಣಿ ಮಾಡಿಕೊಂಡಿದ್ದಾರೆ. ಸರ್ಕಾರದ ಕಾಮಗಾರಿಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರು ದಾಖಲಾದ ನಂತರ ಖೇಣಿ ಪರ ವಕೀಲರು ಪೂರಕ ದಾಖಲೆಗಳನ್ನು ಸಲ್ಲಿಸಲು ಸಮಯಾವಕಾಶ ಕೇಳಿದ್ದರು.
Advertisement
ಇಂದು ಬೆಳಗ್ಗೆ 11 ಘಂಟೆಗೆ ಖೇಣಿಯವರ ಪಾಸ್ ಪೋರ್ಟ್ ಮತ್ತು ಆದಾಯ ತೆರಿಗೆ ಇಲಾಖೆಗೆ ಕಟ್ಟಿರುವ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಖೇಣಿ ಪರ ವಕೀಲರು ಸಲ್ಲಿಸಿದರು. ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಮತದಾರರ ಪಟ್ಟಿಯ ಅಕ್ರಮ ನೊಂದಣಿ ವಿಚಾರಣೆ ನಮ್ಮ ಪರಿಧಿಯಲ್ಲಿ ಬರುವುದಿಲ್ಲ ಈ ಕುರಿತು ಕೇಂದ್ರ ಗೃಹ ಇಲಾಖೆಯ ಸಕ್ಷಮ ಪ್ರಾಧಿಕಾರದಲ್ಲಿ ದೂರನ್ನು ಸಲ್ಲಿಸಬಹುದು. ಸರ್ಕಾರದ ಕಾಮಗಾರಿಗಳಲ್ಲಿ ನೈಸ್ ಕಂಪನಿ ಒಪ್ಪಂದ ಮಾಡಿಕೊಂಡಿದೆಯೇ ವಿನಃ ಖೇಣಿ ಹೆಸರಿನಲ್ಲಿ ಆಗಿಲ್ಲ ಎಂದು 2103ರಲ್ಲೇ ನ್ಯಾಯಾಲಯ ದೂರು ಅರ್ಜಿಯನ್ನು ವಜಾ ಮಾಡಿದೆ ಎಂದು ತಿಳಿಸಿ ಅಶೋಕ್ ಖೇಣಿ ಅವರ ನಾಮಪತ್ರ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
Advertisement
ಆಯೋಗದ ನಿರ್ಧಾರದ ಬಳಿಕ ಪ್ರತಿಕ್ರಿಯಿಸಿದ ಅಬ್ರಹಾಂ, ಅರ್ಜಿಯಲ್ಲಿರುವ ಆಕ್ಷೇಪಣೆಗಳ ವಿಚಾರ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಆಯೋಗ ತಿಳಿಸಿದೆ. ಹೀಗಾಗಿ ನ್ಯಾಯಾಲಯದಲ್ಲಿ ದೂರು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement
2013ರಲ್ಲಿ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷದ ಅಡಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕಣಕ್ಕೆ ಇಳಿದು ಗೆದ್ದಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳಿಗೆ ವೋಟ್ ಹಾಕಿದ್ದ ಖೇಣಿ ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಸೇರಿದ್ದರು. ಪ್ರಸ್ತುತ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ.