ಬೆಂಗಳೂರು: ರೈತರ ಆತ್ಮಹತ್ಯೆಗೆ ಕುಡಿತ, ಜೂಜು ಕಾರಣ ಎಂದಿದ್ದ ನೈಸ್ ಸಂಸ್ಥೆಯ ಮಾಲೀಕ, ಕರ್ನಾಟಕ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪರಮೇಶ್ವರ್ ಅವರು ಶಾಲು ಹಾಕಿ ಖೇಣಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಖೇಣಿ, ನಾನು ಸ್ವತಂತ್ರವಾಗಿ ನಿಂತರೂ ಗೆಲ್ಲುತ್ತೇನೆ ಬೇರೆ ಪಕ್ಷದಿಂದ ನಿಂತರೂ ಗೆಲ್ಲುತ್ತೇನೆ. ನನ್ನ ಕ್ಷೇತ್ರಕ್ಕೆ ಸಿಎಂ 2 ಸಾವಿರ ಕೋಟಿ ನೀಡಿದ್ದಾರೆ. ರಾಜ್ಯದ ನಂಬರ್ ಒನ್ ಕ್ಷೇತ್ರವಾಗಿ ಅಭಿವೃದ್ದಿ ಪಡಿಸಿದ್ದೇನೆ. ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರ ಕೈ ಬಲ ಪಡಿಸೋಕೆ ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.
Advertisement
ಈ ವೇಳೆ ನೈಸ್ ವಿವಾದದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗರಂ ಆದ ಖೇಣಿ ಸುಮ್ಮನೆ ಏನೇನೋ ಕೇಳಬೇಡಿ, ನ್ಯಾಯಾಲಯದಲ್ಲಿ ಎಲ್ಲವೂ ತೀರ್ಮಾನ ಆಗುತ್ತದೆ ಎಂದು ಹೇಳಿದರು.
Advertisement
ಅಶೋಕ್ ಖೇಣಿ ಈ ಹಿಂದೆ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕುಡಿತ, ಜೂಜು, ಮಕ್ಕಳ ಮದುವೆಯಾಗದೇ ಇರುವುದು ಕಾರಣ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.
Advertisement
ಕಳೆದ ವರ್ಷ ಏಕಾಏಕಿ ನೈಸ್ ರಸ್ತೆಯ ಟೋಲ್ ದರವನ್ನು ಏರಿಸಲಾಗಿತ್ತು. ಈ ವಿಚಾರದ ಬಗ್ಗೆ ಅಂದು ಪಬ್ಲಿಕ್ ಟಿವಿಗೆ ಲೋಕೋಪಯೋಗಿ ಇಲಾಖೆಯ ಸಚಿವ ಮಹಾದೇವಪ್ಪ ಪ್ರತಿಕ್ರಿಯಿಸಿ ನೈಸ್ ಕಂಪೆನಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ನಿರ್ಮಿಸಿದೆ ಎಂದು ಹೇಳಿದ್ದರು.
Advertisement
2013ರ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಖೇಣಿ 15,788 ಮತಗಳ ಅಂತರದಿಂದ ಜಯಗಳಿಸಿದ್ದರು. ಖೇಣಿಗೆ 47,763 ಮತಗಳು ಬಿದ್ದಿದ್ದರೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಂಡೆಪ್ಪ ಕಾಶಂಪೂರ್ ಅವರಿಗೆ 31,975 ಮತಗಳು ಬಿದ್ದಿತ್ತು.
https://www.youtube.com/watch?v=Zl-hLyqVbiM
https://www.youtube.com/watch?v=9z4q6ugGYEQ