LatestMain PostNational

ಗಲ್ಲು ಶಿಕ್ಷೆಯಿಂದ ಅತ್ಯಾಚಾರ ಸಂತ್ರಸ್ತೆಯರ ಹತ್ಯೆ ಹೆಚ್ಚಳ: ಕ್ಷಮೆ ಯಾಚಿಸುವಂತೆ ಗೆಹ್ಲೋಟ್‌ಗೆ ಬಿಜೆಪಿ ಒತ್ತಾಯ

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಅತ್ಯಾಚಾರ ಪ್ರಕರಣಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆ ವಿವಾದವನ್ನು ಹುಟ್ಟು ಹಾಕಿದೆ. ಗೆಹ್ಲೋಟ್ ನೀಡಿದ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಕಾನೂನನ್ನು ಜಾರಿಗೊಳಿಸಿದ ಬಳಿಕ ಭಾರತದಲ್ಲಿ ಅತ್ಯಾಚಾರ ಸಂತ್ರಸ್ತೆಯರ ಕೊಲೆ ಪ್ರಕರಣಗಳು ಹೆಚ್ಚಾಗಿವೆ. ನಿರ್ಭಯಾ ಘಟನೆಯ ಬಳಿಕ ಮರಣದಂಡನೆ ಶಿಕ್ಷೆ ಜಾರಿಗೆ ಬಂದಿದೆ. ಅತ್ಯಾಚಾರಿಗಳು ಕೃತ್ಯ ನಡೆಸಿದ ಬಳಿಕ ಸಂತ್ರಸ್ತೆ ಸಾಕ್ಷಿಯಾಗಿರುತ್ತಾಳೆ ಎಂಬ ಕಾರಣಕ್ಕೆ ಆಕೆಯನ್ನೂ ಕೊಂದು ಬಿಡುತ್ತಾರೆ. ಇದು ದೇಶಾದ್ಯಂತ ನಡೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದು ಗೆಹ್ಲೋಟ್ ಶುಕ್ರವಾರ ಹೇಳಿಕೆ ನೀಡಿದ್ದರು.

ಗೆಹ್ಲೋಟ್ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ, ತಮ್ಮ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದು ದುರದೃಷ್ಟಕರ. ಅವರು ಈ ಕೂಡಲೇ ಕ್ಷಮೆ ಕೇಳಬೇಕಾಗಿ ಒತ್ತಾಯಿಸಿದೆ. ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯಗೊಳಿಸಿ – ಹಣಬರ ಯಾದವ ಸಮಾಜದಿಂದ ಬೈಕ್ ರ‍್ಯಾಲಿ

ಈ ಬಗ್ಗೆ ಕಿಡಿಕಾರಿರುವ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್, ಕಳೆದ 3 ವರ್ಷಗಳಿಂದ ರಾಜಸ್ಥಾನ ಮುಗ್ಧ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಕೇಂದ್ರವಾಗಿದೆ. ಅವರ ವೈಫಲ್ಯಗಳನ್ನು ಮರೆಮಾಚಲು ವಿವಾದಾತ್ಮಕ ಹೇಳಿಕೆಯನ್ನು ನೀಡಿ, ಸಮಸ್ಯೆಯನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಅವರು, ಈ ಹೇಳಿಕೆ ದುರದೃಷ್ಟಕರ ಹಾಗೂ ಅವಮಾನಕರ. ಸಿಎಂ ಗೆಹ್ಲೋಟ್ ಅವರು ಅಸಂಬದ್ಧ ಹೇಳಿಕೆಗಳನ್ನು ನೀಡಿ, ತಮ್ಮ ಸರ್ಕಾರದ ವೈಫಲ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: BJP ಮುಖಂಡ ಪ್ರವೀಣ್ ಹತ್ಯೆ ಕೇಸ್ – ಮತ್ತಿಬ್ಬರು ಅರೆಸ್ಟ್

Live Tv

Leave a Reply

Your email address will not be published.

Back to top button