ಓಂಗೋಲ್: ಆಶಾ ಕಾರ್ಯಕರ್ತೆಯೊಬ್ಬಳು ವಿಷಪೂರಿತ ಚಿಪ್ಸ್ ನೀಡಿ 4 ವರ್ಷದ ಬಾಲಕನ್ನು ಸಾಯಿಸಿದ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಚೀಮಕುರ್ತಿಯಲ್ಲಿ ನಡೆದಿದೆ.
4 ವರ್ಷದ ಧನಂಜಯ್ ಮೃತಪಟ್ಟ ಮಗು. ಪೋಷಕರು ಕೆಲಸಕ್ಕೆ ಹೋಗಿದ್ದಾಗ ಆಟವಾಡಲೆಂದು ಧನಂಜಯ್ ಆಶಾ ಕೇಂದ್ರಕ್ಕೆ ಹೋಗಿದ್ದ. ಆದರೆ ಅಲ್ಲಿದ್ದ ಆಶಾ ಕಾರ್ಯಕರ್ತೆ ಜ್ಯೋತಿ ಇಲಿಗಳನ್ನು ಸಾಯಿಸಲೆಂದು ತಂದಿದ್ದ ಇಲಿವಿಷ ಸೇರಿಸಿ ಚಿಪ್ಸ್ ನೀಡಿದ್ದಾಳೆ. ಧನಂಜಯ್ ವಿಷದ ವಾಸನೆ ಬರುತ್ತಿದೆ ಎಂದು ಹೇಳಿದರೂ ಜ್ಯೋತಿ ಒತ್ತಾಯಪೂರ್ವಕವಾಗಿ ಚಿಪ್ಸ್ ತಿನ್ನಿಸಿದ್ದಾಳೆ ಎಂದು ಕೇಂದ್ರದಲ್ಲಿದ್ದ ಮಕ್ಕಳು ಹೇಳಿದ್ದಾರೆ.
ನಾವು ಕೂಡಾ ಚಿಪ್ಸ್ ಬೇಕು ಎಂದು ಕೇಳಿದ್ದೆವು. ಆದರೆ ಜ್ಯೋತಿ ಮ್ಯಾಡಂ ನಮಗೆ ಚಿಪ್ಸ್ ನೀಡಲು ನಿರಾಕರಿಸಿದರು. ಇದನ್ನು ನೀವು ತಿನ್ನುವಂತಿಲ್ಲ ಎಂದು ಹೇಳಿದ್ದರು ಎಂದು ಮಕ್ಕಳು ಹೇಳಿದ್ದಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ.
ಧನಂಜಯ್ ಸೋದರ ತರುಣ್ ಕೂಡಾ ಕಳೆದ ವರ್ಷ ಇದೇ ರೀತಿ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ತರುಣ್ ಸಾವಿನಲ್ಲಿ ಜ್ಯೋತಿ ಕೈವಾಡವಿತ್ತಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.