– ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಿಲ್ಲ
ಶಿವಮೊಗ್ಗ: ಕೊರೊನಾ ವೈರಸ್ ಕಾಣಿಸಿಕೊಂಡ ದಿನದಿಂದ ವೈದ್ಯರು, ದಾದಿಯರ ರೀತಿ ಆಶಾ ಕಾರ್ಯಕರ್ತೆಯರು ಸಹ ತಮ್ಮ ಜೀವವನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಇಂತಹ ಆಶಾ ಕಾರ್ಯಕರ್ತೆಗೆ ಇರುವುದಕ್ಕೆ ಒಂದು ಸೂರಿಲ್ಲ. ಗುಡಿಸಿಲಿನಲ್ಲಿ ವಾಸಿಸುತ್ತಿರುವ ಈ ಕುಟುಂಬ ಪ್ರತಿದಿನ ತಮ್ಮ ಜೀವವನ್ನು ಕೈಯಲ್ಲಿಡಿದುಕೊಂಡು ಕಾಲದೂಡುವಂತಾಗಿದೆ.
ಶಿವಮೊಗ್ಗದ ರಾಮೇನಕೊಪ್ಪದಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೀತಿ ಎಂಬವರ ಮನೆ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ದನದ ಕೊಟ್ಟಿಗೆಗೂ ಯೋಗ್ಯವಲ್ಲದ ಮನೆಯಲ್ಲಿ ಕುಟುಂಬದ ವೃದ್ಧರು, ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ವಾಸಮಾಡುತ್ತಿದ್ದಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಮಳೆಗೆ ಪ್ರವಾಹ ಬಂದು ಇದ್ದ ಮನೆ ಬಿದ್ದು ಹೋಗಿದೆ. ಅಂದಿನಿಂದ ಈ ಕುಟುಂಬ ದನದ ಕೊಟ್ಟಿಗೆಯಲ್ಲಿ ವಾಸಿಸುತ್ತಿದೆ. ಅದು ಯಾವಾಗ ಬೀಳುತ್ತದೋ ಎಂಬ ಭಯದ ನಡುವೆ ಈ ಕುಟುಂಬ ಕಾಲದೂಡುತ್ತಿದೆ. ಸಂಜೆ ಆಯಿತು ಅಂದರೆ ಹಾವು, ಚೇಳುಗಳ ಕಾಟ ಇದೆ.
ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿ ಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಈ ಕುಟುಂಬಕ್ಕೆ ಇದುವರೆಗೂ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಹೀಗಾಗಿ ಕೊಟ್ಟಿಗೆಯಲ್ಲಿಯೇ ವಾಸಿಸುತ್ತಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಹ ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ಸರ್ಕಾರ ಪ್ರತಿವರ್ಷ ಗ್ರಾಮ ಪಂಚಾಯ್ತಿ, ಸ್ಥಳೀಯ ಸಂಸ್ಥೆ ಮೂಲಕ ಆಶ್ರಯ ವಸತಿ ಯೋಜನೆಯಡಿ ಸಾವಿರಾರು ಮನೆಗಳನ್ನು ಕೊಡುತ್ತೇವೆ ಎಂದು ಹೇಳುತ್ತೆ. ಆದರೆ ಅವೆಲ್ಲಾ ಎಲ್ಲಿ ನಿರ್ಮಾಣ ಆಗುತ್ತಿದೆ ಎನ್ನುವುದೇ ಪ್ರಶ್ನೆಯಾಗಿದೆ. ಅಲ್ಲದೇ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸಹ ಇದೇ ಜಿಲ್ಲೆಯವರು, ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲೆಯಲ್ಲಿಯೇ ಇಂತಹ ಸ್ಥಿತಿ ಇದ್ದರೆ ಇನ್ನೂ ರಾಜ್ಯದ ಇತರೆಡೆಗಳ ಸ್ಥಿತಿ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.