ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ರಾಷ್ಟ್ರೀಯ ಉಪಾಧ್ಯಕ್ಷನನ್ನು ಪಕ್ಷದ ನಾಯಕಿ ಮಾಯಾವತಿ ಕಿತ್ತು ಹಾಕಿದ್ದಾರೆ.
ಮಗು ತನ್ನ ತಂದೆ ಅಥವಾ ತಾಯಿಯನ್ನು ಹೋಲುತ್ತದೆ. ರಾಹುಲ್ ಗಾಂಧಿ ತನ್ನ ತಂದೆಯ ಗುಣಗಳನ್ನು ಹೊಂದಿದ್ದರೆ, ಉತ್ತಮ ರಾಜಕಾರಣಿ ಆಗುತ್ತಿದ್ದರು. ಆದರೆ ಅವರ ದೇಹದಲ್ಲಿ ಸೋನಿಯಾ ಗಾಂಧಿ ಅವರ ರಕ್ತವಿದೆ. ಹೀಗಾಗಿ ರಾಹುಲ್ ಗಾಂಧಿ ವಿದೇಶಿಗರು. ಅವರು ಭಾರತೀಯ ರಾಜಕೀಯ ಜೀವನದಲ್ಲಿ ಯಶಸ್ವಿ ಆಗುವುದಿಲ್ಲವೆಂದು ನಾನು ಖಾತರಿ ಕೊಡುತ್ತೇನೆ ಎಂದು ಬಿಎಸ್‍ಪಿ ಉಪಾಧ್ಯಕ್ಷ ಜೈ ಪ್ರಕಾಶ್ ಸಿಂಗ್ ಹೇಳಿಕೆ ನೀಡಿದ್ದರು.
Advertisement
ಜೈ ಪ್ರಕಾಶ್ ಸಿಂಗ್ ಹೇಳಿಕೆಯಿಂದ ವಿಚಲಿತರಾದ ಮಾಯಾವತಿ, ಜೈ ಪ್ರಕಾಶ್ ಪಕ್ಷದ ಧೋರಣೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ಹೇಳಿಕೆ ಪ್ರಕಾಶ್ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
Advertisement
Advertisement
2018ರ ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟವನ್ನು ಮಾಯಾವತಿ ಬೆಂಬಲಿಸಿದ್ದರು. ಅಷ್ಟೇ ಅಲ್ಲದೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೋನಿಯಾ ಗಾಂಧಿ ಕೈಯನ್ನು ಮೇಲಕ್ಕೆ ಎತ್ತಿ ಮೈತ್ರಿ ಕೂಟಕ್ಕೆ ಬೆಂಬಲ ನೀಡಿದ್ದರು.
Advertisement
ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಇದೇ ವರ್ಷ ನಡೆಯಲಿದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ನಡೆಸಲು ಮಾಯಾವತಿ ಮುಂದಾಗಿದ್ದಾರೆ. ಜೈ ಪ್ರಕಾಶ್ ಹೇಳಿಕೆಯಿಂದ ಮೈತ್ರಿ ಕೂಟದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನುವುದನ್ನು ಅರಿತ ಮಾಯಾವತಿ ಅಮಾನತು ಮಾಡುವ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.