ಅಮೇಥಿಯಿಂದ ರಾಗಾ ಕಣಕ್ಕಿಳಿಸಲು ಕಾಂಗ್ರೆಸ್‌ ಹೆದರಿದೆಯೇ?: ಅಮಿತ್ ಮಾಳವೀಯ

Public TV
2 Min Read
AMIT MALAVIYA

ನವದೆಹಲಿ: ಕೊನೆಗೂ ಅಳೆದುತೂಗಿ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿ ರಿಲೀಸ್‌ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಬಹುನಿರೀಕ್ಷಿತ ಕ್ಷೇತ್ರ ಅಮೇಥಿಯನ್ನು ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವೀಯ (Amit Malviya) ಅವರು ಕೈ ನಾಯಕರನ್ನು ಕಾಲೆಳೆದಿದ್ದಾರೆ.

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ತಮ್ಮ ಎಕ್ಸ್‌ ಖಾತೆಯಲ್ಲಿ, “ಅಮೇಥಿ ಕ್ಷೇತ್ರದಿಂದ (Amethi Constituency) ರಾಹುಲ್ ಗಾಂಧಿಯವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಹೆದರಿದೆಯೇ..?” ಎಂದು ಬರೆದುಕೊಂಡಿದ್ದಾರೆ.

ಉತ್ತರಪ್ರದೇಶ ಬಿಟ್ಟು ಕಾಂಗ್ರೆಸ್‌ 39 ಅಭ್ಯರ್ಥಿಗಳ ಹೆಸರನ್ನು ಇಂದು (ಶುಕ್ರವಾರ) ಘೋಷಣೆ ಮಾಡಿದ ಬಳಿಕ ಮಾಳವೀಯ ಈ ಮೂಲಕ ವ್ಯಂಗ್ಯವಾಡಿದ್ದಾರೆ. ಇಂದು ಬಿಡುಗಡೆ ಮಾಡಿದ ಕಾಂಗ್ರೆಸ್‌ನ ಪಟ್ಟಿಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ರಾಹುಲ್ ಗಾಂಧಿ ಗೆದ್ದು ಬಿಜೆಪಿ ಸೋತ ರಾಯ್ ಬರೇಲಿ ಅಥವಾ ಅಮೇಥಿಯನ್ನು ಉಲ್ಲೇಖಿಸಿಲ್ಲ.

ಮೊದಲ ಪಟ್ಟಿಯ ಪ್ರಕಾರ, ಈ ಬಾರಿಯ ಲೋಕಸಭಾ ಚುನಾವಣೆಗೆ ಕೇರಳದ ವಯನಾಡ್ ಕ್ಷೇತ್ರದಿಂದ (Wayanad Constituency) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ ರಾಹುಲ್ ಗಾಂಧಿ ಅವರು ಅಮೇಥಿಗೆ ಮರಳುತ್ತಾರೆಯೇ ಮತ್ತು ಅವರ ಹಳೆಯ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ (Smriti Irani) ಅವರನ್ನು ಸೋಲಿಸುವ ಮೊದಲು ರಾಹುಲ್ ಗಾಂಧಿ (Rahul Gandhi) ಅವರು ಸತತವಾಗಿ ಮೂರು ಬಾರಿ ಗೆದ್ದಿದ್ದರು. 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಸೋಲನ್ನು ಕಂಡರು. ಆದರೆ 2019ರಲ್ಲಿ ಅಮೇಥಿಯ ಮತದಾರರು ಇರಾನಿ ಅವರ ಕೈಹಿಡಿದರು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಿಗೆ ಅಮೇಥಿ ಪ್ರತಿಷ್ಠೆಯ ಕ್ಷೇತ್ರವಾಗಿದೆ.

ಹಾಲಿ ಸಂಸದೆ ಸ್ಕೃತಿ ಇರಾನಿಯವರು ಈ ಹಿಂದೆ ಕಾಂಗ್ರೆಸ್‌ (Congress First List) ಬಗ್ಗೆ ವ್ಯಂಗ್ಯವಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಅಭ್ಯರ್ಥಿಯನ್ನು ಘೋಷಿಸಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗುತ್ತಿಲ್ಲ, ಸೋಲಿನ ಭಯ ಅವರನ್ನು ಕಾಡುತ್ತಿದೆ. ಅಮೇಥಿಯ ಜನರು ಮತ್ತೆ ತಮ್ಮ ಶಕ್ತಿಯನ್ನು ತೋರುತ್ತಾರೆ ಎಂಬ ಸತ್ಯ ಕಾಂಗ್ರೆಸ್​ಗೆ ಗೊತ್ತಿದೆ ಎಂದಿದ್ದರು.

Share This Article