ಚಿತ್ರದುರ್ಗ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ನಟಿ ಭಾವನ ಹೇಳಿದ್ದಾರೆ. ಭಾವನ ಮೂಲತಃ ಚಿತ್ರದುರ್ಗ ನಗರದ ಬುರುಜನಹಟ್ಟಿ ಬಡಾವಣೆಯ ನಿವಾಸಿಯಾಗಿದ್ದು, ಭಾನುವಾರ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಎಲ್ಲರ ರಕ್ತ ಬಿಸಿಯಾಗಿದೆ. ಹಾಗೆಯೇ ನನ್ನ ಎದೆ ಬಡಿತ ಹೆಚ್ಚಾಗಿದೆ. ಕಾಂಗ್ರೆಸ್ ವರಿಷ್ಟರು ಹಾಗು ಕಾರ್ಯಕರ್ತರ ಸಹಕಾರದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕಳಾಗಿದ್ದೇನೆ. ಅಲ್ಲದೇ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿರುವುದಾಗಿ ತಿಳಿಸಿದರು.
ಆದರೆ ಪಕ್ಷದ ಹಿರಿಯರು, ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗು ವರಿಷ್ಟರ ಸಹಕಾರ, ಮಾರ್ಗದರ್ಶನ ಮತ್ತು ಆಶೀರ್ವಾದದ ಅಗತ್ಯವಿದ್ದು, ಎಲ್ಲರ ಬೆಂಬಲದೊಂದಿಗೆ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜನರ ಮುಂದೇ ಬರಲು ಇಷ್ಟಪಡುತ್ತೆನೆ ಎಂದರು.