ನವದೆಹಲಿ: ದೆಹಲಿ ಕಾಂಗ್ರೆಸ್ (Congress) ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಅರವಿಂದರ್ ಸಿಂಗ್ ಲವ್ಲಿ (Arvinder Singh Lovely) ಇಂದು ಅಧಿಕೃತವಾಗಿ ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ. ಅವರ ಜೊತೆ ಮಾಜಿ ಶಾಸಕರಾದ ರಾಜ್ ಕುಮಾರ್ ಚೌಹಾಣ್, ನಸೀಬ್ ಸಿಂಗ್, ನೀರಜ್ ಬಸೋಯಾ ಮತ್ತು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಮಿತ್ ಮಲಿಕ್ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಆಮ್ ಆದ್ಮಿ (APP) ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದನ್ನು ಖಂಡಿಸಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಅವರು, ತಮ್ಮ ರಾಜೀನಾಮೆ, ಹುದ್ದೆಗೆ ಮಾತ್ರವೇ ಹೊರತು, ಪಕ್ಷಕ್ಕಲ್ಲ ಎಂದಿದ್ದರು.
ಕಳೆದ ವಾರ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರದಲ್ಲಿ, ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್ ಮತ್ತು ವಾಯುವ್ಯ ದೆಹಲಿಯಿಂದ ಉದಿತ್ ರಾಜ್ ಅವರ ನಾಮಪತ್ರ ಸಲ್ಲಿಕೆಯನ್ನು ಟೀಕಿಸಿದ್ದರು. ಅವರು ದೆಹಲಿ ಕಾಂಗ್ರೆಸ್‍ಗೆ ಸಂಪೂರ್ಣ ಅಪರಿಚಿತರು ಎಂದು ಜರಿದಿದ್ದರು. ಅಲ್ಲದೇ ಕೆಲವರು ಟಿಕೆಟ್ ವಿಚಾರಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಪಕ್ಷವನ್ನು ತೊರೆಯುವುದಿಲ್ಲ ಎಂದಿದ್ದರು.
ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರ ಆರೋಪಗಳನ್ನು ಹೊರಿಸುವ ಏಕೈಕ ಆಧಾರದ ಮೇಲೆ ರಚಿಸಲಾದ ಪಕ್ಷದೊಂದಿಗಿನ ಮೈತ್ರಿಗೆ ದೆಹಲಿ ಕಾಂಗ್ರೆಸ್ ಘಟಕದ ವಿರೋಧವಿತ್ತು. ಅದರ ಹೊರತಾಗಿಯೂ, ಪಕ್ಷವು ದೆಹಲಿಯಲ್ಲಿ ಆಪ್ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿದ್ದಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದರು.