ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) 50 ದಿನಗಳ ಬಳಿಕ ಬಿಡುಗಡೆಯಾಗಿದ್ದಾರೆ. ವಿವಿಧೆಡೆ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮುನ್ನವೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಶುಕ್ರವಾರ ಸಂಜೆಯಷ್ಟೇ ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದ ಕೇಜ್ರಿವಾಲ್ ಇಂದು (ಮೇ 11) ಬೆಳಗ್ಗೆ 11 ಗಂಟೆ ವೇಳೆಗೆ ಹನುಮಾನ್ ಮಂದಿರಕ್ಕೆ (Hanuman Temple) ಭೇಟಿ ನೀಡಿದ್ದಾರೆ. ಪತ್ನಿಯೊಂದಿಗೆ ದೆಹಲಿಯ ಕನೌಟ್ ಪ್ಲೇಸ್ (Delhi’s Connaught Place) ನಗರದಲ್ಲಿರುವ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಎಎಪಿ ಕಾರ್ಯಕರ್ತರೂ ಪಾಲ್ಗೊಂಡಿದ್ದಾರೆ. ಪೂಜೆ ವೇಳೆ ಮಂದಿರದ ಸುತ್ತ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.
ಸಂಜೆ ರೋಡ್ ಶೋ:
ಮಧ್ಯಂತರ ಜಾಮೀನು ಪಡೆದ ಮರುದಿನದಿಂದಲೇ ಚುನಾವಣಾ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕೇಜ್ರಿವಾಲ್ ದೇವಸ್ಥಾನದ ಪೂಜಾ ಕಾರ್ಯಗಳು ಮುಗಿಯುತ್ತಿದ್ದಂತೆ ಆಪ್ ಕಾರ್ಯಕರ್ತರೊಂದಿಗೆ ಅಲ್ಲಿಯೇ ಸಭೆ ನಡೆಸಿದ್ದಾರೆ. ಮೇ 11 ರಂದು ಸಂಜೆ 5 ಗಂಟೆ ವೇಳೆಗೆ, ದಕ್ಷಿಣ ದೆಹಲಿಯಲ್ಲಿ ಆಪ್ ನಿಂದ ಆಯೋಜನೆಗೊಂಡ ರೋಡ್ ಶೋನಲ್ಲಿಯೂ (AAP Road Show) ಕೇಜ್ರಿವಾಲ್ ಭಾಗವಹಿಸಲಿದ್ದಾರೆ.
ಜೂ.1 ರ ವರೆಗೆ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಮೇ 25 ರಂದು ದೆಹಲಿಯ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಮತ್ತು ಇಂಡಿಯಾ ಬ್ಲಾಕ್ ಪರ ಕೇಜ್ರಿವಾಲ್ ಪ್ರಚಾರ ಮಾಡಲಿದ್ದಾರೆ.
ಕೇಂದ್ರದ ವಿರುದ್ಧ ವಾಗ್ದಾಳಿ:
ಇನ್ನೂ ಜೈಲಿನಿಂದ ಹೊರಬರುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನೀವು ನನಗೆ ನಿಮ್ಮ ಆಶೀರ್ವಾದವನ್ನು ನೀಡಿದ್ದೀರಿ. ನಾನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರಿಂದಲೇ ನಾನು ನಿಮ್ಮ ಮುಂದೆ ಇದ್ದೇನೆ. ನಾವು ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.